ವಿರಾಜಪೇಟೆಯ ಕೂರ್ಗ್ ವ್ಯಾಲಿ ಸ್ಕೂಲ್‌ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
admincoorgdaily

ವಿರಾಜಪೇಟೆ:ವಿರಾಜಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಮ್ಮತ್ತಿ ವಲಯದ ವತಿಯಿಂದ ವಿರಾಜಪೇಟೆಯ ಕೂರ್ಗ್ ವ್ಯಾಲಿ ಸ್ಕೂಲ್‌ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷರಾದ ಅಂಬಿಕಾ ವಹಿಸಿದ್ದರು. ಶಾಲಾ ಸಂಸ್ಥಾಪಕರಾದ ಚಿತ್ರಭಾನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ದೇವಣಗೇರಿ ಶಾಲೆಯ ಬಿ.ಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಲೋಕೇಶ್ ಎಚ್.ಡಿ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ ಇದರಿಂದ ಪಾಲಕ ವರ್ಗ ಆತಂಕಕ್ಕೆ ಒಳಗಾಗುವ ಸ್ಥಿತಿ ಬಂದಿದೆ. ದುಶ್ಚಟಗಳು ಬದುಕನ್ನು ಸುಡುವ ಬೆಂಕಿಯಂತೆ. ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವಯುತ ಜೀವನ ನಡೆಸಬಹುದು.
ತಂಬಾಕು ಮತ್ತು ಸಿಗರೇಟ್ ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ ಉಂಟಾಗುತ್ತದೆ. ಮದ್ಯಪಾನದಿಂದ ಲಿವರ್ ಕೆಡುತ್ತದೆ. ಮೊಬೈಲ್, ಸಾಮಾಜಿ ಜಾಲತಾಣ ಅತಿಯಾದ ಬಳಕೆ, ನಿದ್ರೆ ಕಡಿಮೆ, ಏಕಾಗ್ರತೆ ಸಮಸ್ಯೆ, ಡ್ರಗ್ಸ್ ಮತ್ತು ಮಾದಕ ವಸ್ತುಗಳು ಆರೋಗ್ಯದ ಸಮಸ್ಯೆ ಉಂಟು ಮಾಡುತ್ತದೆ. ದುಶ್ಚಟಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ.
ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿರಬೇಕು. ಸಮಾಜದಲ್ಲಿ ಉತ್ತಮವಾದ ಗೌರವ ಸಿಗಬೇಕು ಎಂದು ಮಾಹಿತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕರಾದ ಸುಮಾ ಚಿತ್ರಬಾನು ಮಾತನಾಡಿ ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು. ಮಕ್ಕಳ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಅತಿಯಾದ ಮೊಬೈಲ್ ಬಳಕೆ ಕೂಡ ಒಂದು ದುಶ್ಚಟಕ್ಕೆ ಕಾರಣವಾಗುತ್ತಿದೆ. ಮೇಲ್ವಿಚಾರಕರಾದ ದನೇಶ್ ಕುಮಾರ್ ಶಾಲಾ ಸಹ ಶಿಕ್ಷಕರಾದ, ಶ್ವೇತಾ, ಮಂಜುನಾಥ, ಮಿಥುನ್, ವಿಲ್ಸನ್, ಇತರ ಸಿಬ್ಬಂದಿ ಹಾಗೂ ಸೇವಾಪ್ರತಿನಿಧಿ ಪದ್ಮಲತಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.