Kodagu

ಸಿಲೋನ್ ಮಾಸ್ಟರ್ಸ್‌ನಲ್ಲಿ ತಾತಪಂಡ ಜ್ಯೋತಿ ಸೋಮಯ್ಯಗೆ ಮೂರು ಚಿನ್ನ, ಒಂದು ಕಂಚು

admincoorgdaily

ಸಿಲೋನ್ ಮಾಸ್ಟರ್ಸ್‌ನಲ್ಲಿ ತಾತಪಂಡ ಜ್ಯೋತಿ ಸೋಮಯ್ಯಗೆ ಮೂರು ಚಿನ್ನ, ಒಂದು ಕಂಚು

ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ಜೂನ್ 25ರಿಂದ 28ರವರೆಗೆ ನಡೆದ ಸಿಲೋನ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್–2026ರಲ್ಲಿ ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

60+ ಹಾಗೂ ಕಂಬೈನ್ಡ್ ವಯೋಮಿತಿ ವಿಭಾಗಗಳಲ್ಲಿ ಸ್ಪರ್ಧಿಸಿದ ಜ್ಯೋತಿ ಸೋಮಯ್ಯ, ಭಾರತ ತಂಡದ ಪರವಾಗಿ ವೈಯಕ್ತಿಕವಾಗಿ ಅತ್ಯಧಿಕ ಮೂರು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

60+ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಯುಎಇಯ ವಿದ್ಯಾ ಮಂಘ್ನಾನಿ ವಿರುದ್ಧ 21-15, 14-21, 21-14 ಅಂತರದಿಂದ ಜಯ ಸಾಧಿಸಿ ಮೊದಲ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಬಳಿಕ 60+ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಕೃಷ್ಣವೇಣಿ ಮಟ್ಟೆರ್ ಅವರೊಂದಿಗೆ ಜತೆಯಾಗಿ ಆಡಿದ ಜ್ಯೋತಿ, ಯುಎಇಯ ವಿದ್ಯಾ ಮಂಘ್ನಾನಿ ಹಾಗೂ ರಮಾ ಶಂಕರನ್ ನಾರಾಯಣ್ ಜೋಡಿಯನ್ನು 21-18, 23-21 ಅಂತರದಿಂದ ಮಣಿಸಿ ಎರಡನೇ ಚಿನ್ನ ಗೆದ್ದರು.

ಕಂಬೈನ್ಡ್ 130+ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮಂಗಳೂರಿನ ಬೀನಾ ಶೆಟ್ಟಿ ಅವರೊಂದಿಗೆ ಕಣಕ್ಕಿಳಿದ ಜ್ಯೋತಿ, ಶ್ರೀಲಂಕಾದ ಎನೋಕಾ ಜಯಲತ್ ಮತ್ತು ರೀಟಾ ಮನ್ನಪೇರುಮಾ ಜೋಡಿಯನ್ನು 21-7, 21-10 ಅಂತರದಿಂದ ಸೋಲಿಸಿ ಮೂರನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಇದೇ ವೇಳೆ 60+ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಂಗಳೂರಿನ ನಂಜುಂಡ ಪೂಜಾರಿ ಅವರೊಂದಿಗೆ ಆಡಿದ ಜ್ಯೋತಿ, ಶ್ರೀಲಂಕಾದ ನಿರೋಷನಾ ವಿಜೆಕೂನ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಕೃಷ್ಣವೇಣಿ ಮಟ್ಟೆರ್ ವಿರುದ್ಧದ ಪಂದ್ಯದಲ್ಲಿ 21-9, 21-15 ಅಂತರದಿಂದ ಜಯ ಸಾಧಿಸಿ ಕಂಚಿನ ಪದಕ ಗೆದ್ದರು.

ಒಟ್ಟಾರೆ ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕಗಳೊಂದಿಗೆ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿದ ತಾತಪಂಡ ಜ್ಯೋತಿ ಸೋಮಯ್ಯ ಅವರ ಸಾಧನೆ ಭಾರತೀಯ ಹಿರಿಯ ಬ್ಯಾಡ್ಮಿಂಟನ್‌ಗೆ ಹೊಸ ಮೆರುಗು ತಂದಿದ್ದು, ಕ್ರೀಡಾ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.