ನಾಲ್ಕು ವರ್ಷದಿಂದ ಉಳಿಸಿದ ನಾಣ್ಯಗಳಿಂದಲೇ ಮಗಳಿಗೆ ಸ್ಕೂಟರ್ ಕೊಡಿಸಿದ ಟೀ ವ್ಯಾಪಾರಿ!
ಮಿಡ್ನಾಪುರ: ಮಗಳ ಕನಸನ್ನು ನನಸಾಗಿಸಲು ಬಂಗಾಳದ ಚಹಾ ಮಾರಾಟಗಾರರೊಬ್ಬರು ನಾಲ್ಕು ವರ್ಷಗಳ ಕಾಲ ನಾಣ್ಯಗಳನ್ನು ಕೂಡಿಟ್ಟು ಕೊನೆಗೂ ಸ್ಕೂಟರ್ ಖರೀದಿಸಿದ್ದಾನೆರೆ. ತಂದೆಯ ಪ್ರೀತಿ ಮತ್ತು ತ್ಯಾಗದ ಪ್ರತೀಕದಂತಿರುವ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮನಸೆಳೆದಿದೆ.
ಚಂದ್ರಕೋಣದ ಮೌಲಾ ಗ್ರಾಮದ ಬಚ್ಚು ಚೌಧರಿ ಎಂಬವರು ತಮ್ಮ ಪುಟ್ಟ ಮಗಳ ಕನಸಿನ ಸ್ಕೂಟರ್ ಖರೀದಿಸಲು ವರ್ಷಗಳಿಂದ ಸಂಗ್ರಹಿಸಿದ ನಾಣ್ಯಗಳಿಂದ ತುಂಬಿದ ದೊಡ್ಡ ಡ್ರಮ್ನೊಂದಿಗೆ ಮಿಡ್ನಾಪುರದ ದ್ವಿಚಕ್ರ ವಾಹನ ಶೋ ರೂಂಗೆ ಹೋಗಿದ್ದಾರೆ.
ಮೊದಲು, ಕಂತುಗಳಲ್ಲಿ ಖರೀದಿಸಲು ಸಾಧ್ಯವಿದೆಯೇ ಎಂದು ಕೇಳಿದ ಚೌಧರಿ, ಬಳಿಕ “ನಾಣ್ಯಗಳಲ್ಲಿ ಪಾವತಿಯನ್ನು ಸ್ವೀಕರಿಸುತ್ತೀರಾ?” ಎಂದು ಅಚ್ಚರಿಯ ಪ್ರಶ್ನೆ ಹಾಕಿದರು. ಶೋ ರೂಂ ಸಿಬ್ಬಂದಿ ‘ಹೌದು’ ಎಂದಾಗ, ಚೌಧರಿ ಹತ್ತಿರದಲ್ಲೇ ನಾಣ್ಯಗಳಿಂದ ತುಂಬಿದ ಡ್ರಮ್ ಹೊತ್ತುಕೊಂಡು ಹಿಂತಿರುಗಿದರು.
ಅದನ್ನು ಎತ್ತಲು ಎಂಟು ಮಂದಿ ಸಿಬ್ಬಂದಿಯ ಸಹಾಯ ಬೇಕಾಯಿತು. “ಡ್ರಮ್ ತೆರೆಯುತ್ತಿದ್ದಂತೆಯೇ ಎಲ್ಲರೂ ಬೆರಗಾದೆವು. ಎಣಿಸಲು ಎರಡು ಗಂಟೆ 25 ನಿಮಿಷ ಬೇಕಾಯಿತು. ಒಟ್ಟು ರೂ.1.10 ಲಕ್ಷ ಇದ್ದು, ರೂ.69 ಸಾವಿರ ನಾಣ್ಯಗಳಲ್ಲಿ ಮತ್ತು ಉಳಿದವು ನೋಟುಗಳಲ್ಲಿ ಇತ್ತು,” ಎಂದು ಶೋ ರೂಂ ಸಿಬ್ಬಂದಿ ಅರಿಂದಮ್ ಹೇಳಿದ್ದಾರೆ.
“ಒಮ್ಮೆ ನನ್ನ ಮಗಳು ಬೈಕ್ ಕೇಳಿದಳು. ಆಗ ನನಗೆ ಹಣ ಇರಲಿಲ್ಲ. ಆದರೆ ಆಕೆಯ ನಿರೀಕ್ಷೆಗೆ ನನ್ನ ಮನಸ್ಸು ಮರುಗಿತು. ಪ್ರತಿದಿನ ಚಹಾ ಅಂಗಡಿಯಿಂದ ಬರುವ ನಾಣ್ಯಗಳನ್ನು ಡಬ್ಬದಲ್ಲಿ ಹಾಕಿ ಇಡಲು ಪ್ರಾರಂಭಿಸಿದೆ. ನಾಲ್ಕು ವರ್ಷಗಳ ಬಳಿಕ ಅವಳ ಕನಸನ್ನು ಈಡೇರಿಸಲು ಸಾಧ್ಯವಾಯಿತು,” ಎಂದು ಬಚ್ಚು ಚೌಧರಿ ಹೇಳಿದರು,