ವಿಶೇಷಚೇತನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ವಿಶೇಷಚೇತನರ ಕುಂದುಕೊರತೆ ಸಕಾಲದಲ್ಲಿ ಸ್ಪಂದಿಸಿ: ಸೋಮಶೇಖರ್

Aug 21, 2026 - 16:24
 0  37
ವಿಶೇಷಚೇತನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ  :  ವಿಶೇಷಚೇತನರ ಕುಂದುಕೊರತೆ ಸಕಾಲದಲ್ಲಿ ಸ್ಪಂದಿಸಿ: ಸೋಮಶೇಖರ್

ಮಡಿಕೇರಿ ಆ.21:-ವಿಶೇಷ ಚೇತನರ ಕುಂದುಕೊರತೆ ಅಹವಾಲು ಆಲಿಸುವ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆಯಿತು. 

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷಚೇತನರ ಅಹವಾಲನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.  

ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ನಡೆಸಬೇಕು. ತಮ್ಮ ಹಂತದಲ್ಲಿ ಪರಿಹಾರ ಆಗದಿರುವ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ತಾಲ್ಲೂಕು ಮಟ್ಟದಲ್ಲಿಯೂ ಸಹ ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜೊತೆಗೆ ಸೌಲಭ್ಯಗಳ ಬಗ್ಗೆಯೂ ಸಹ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

 ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗಾಗಿ ನಿಗಧಿ ಮಾಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಾಕೀತು ಮಾಡಿದರು. 

 ವಿಶೇಷಚೇತನರನ್ನು ಕಚೇರಿಗಳಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಚೇರಿಗೆ ಸುತ್ತಾಡಿಸುವುದು ಅಥವಾ ಶತಾಯಿಸುವುದು ಸರಿಯಾದ ಬೆಳವಣಿಗೆಯಲ್ಲ. ವಿಶೇಷಚೇತನರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  

 ಕಚೇರಿ ಹಾಗೂ ಶಾಲೆಗಳಲ್ಲಿ ವಿಶೇಷಚೇತನರಿಗೆ ರ್ಯಾಂಪ್ ವ್ಯವಸ್ಥೆ ಇರಬೇಕು. ವಿಶೇಷಚೇತನರು ಕಚೇರಿ ಒಳಭಾಗಕ್ಕೆ ಬರಲು ಕಷ್ಟಸಾಧ್ಯವಾದಲ್ಲಿ, ಅವರ ಬಳಿಗೆ ಭೇಟಿ ನೀಡಿ, ಆಗಬೇಕಿರುವ ಕೆಲಸಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. 

  ವಿಶೇಷಚೇತನರಿಗಾಗಿ ತಾಲ್ಲೂಕು ಮಟ್ಟದಲ್ಲಿಯೂ ಆಧಾರ್ ನೋಂದಣಿ ಶಿಬಿರ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.  

  ಕೊಡಗು ವಿದ್ಯಾಲಯದ ವೀಣಾ ಚಂಗಪ್ಪ ಅವರು ಮಾತನಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಬೇಕು ಎಂದು ಅವರು ಮನವಿ ಮಾಡಿದರು. 

 ಈ ಸಂದರ್ಭದಲ್ಲಿ ಮಾತನಾಡಿದ ವಿಶೇಷಚೇತನರ ಅಧಿಕಾರಿ ವಿಮಲ ಅವರು ಜಿಲ್ಲೆಯಲ್ಲಿ ಮಡಿಕೇರಿ, ಶನಿವಾರಸಂತೆ, ಸುಂಟಿಕೊಪ್ಪ, ಪಾಲಿಬೆಟ್ಟದಲ್ಲಿ ವಿಶೇಷ ಶಾಲೆಗಳು ನಡೆಯುತ್ತಿವೆ. ಹಾಗೆಯೇ ಮನೆಯಿಂದಲೂ ಸಹ 276 ವಿಶೇಷಚೇತನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಲ್ಲಿ ಶಿಕ್ಷಣ ಇಲಾಖೆ ಜೊತೆ ಸಮನ್ವಯ ಸಾಧಿಸಲಾಗುವುದು ಎಂದರು. 

ವಿಶೇಷಚೇತನರ ಅಧಿಕಾರಿ ವಿಮಲ ಅವರು ಮಾತನಾಡಿ ವಿಶೇಷಚೇತನರಿಗೆ ಹಲವು ಸೌಲಭ್ಯಗಳಿದ್ದು, ಸರ್ಕಾರದಿಂದ ಗುರುತಿನ ಚೀಟಿ, ತ್ರಿಚಕ್ರ ವಾಹನ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದರು. 

ದೇಹದ ಯಾವುದೇ ಭಾಗದಲ್ಲಿ ಶೇ.40 ಕ್ಕಿಂತ ಹೆಚ್ಚು ವಿಕಲತೆ ಹೊಂದಿದ್ದರೆ, ಅಂತವರನ್ನು ವಿಶೇಷಚೇತನರೆಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 

ವಿಶೇಷಚೇತನರ ಜಿಲ್ಲಾಧ್ಯಕ್ಷರಾದ ಬಿ.ಎಂ.ತಿರುಮಲೇಶ್ ಅವರು ಮಾತನಾಡಿ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ತಲುಪದೆ ತೊಂದರೆ ಆಗಿದೆ. ಜೊತೆಗೆ ವಿಶೇಷಚೇತನರಿಗೆ 32 ಸಾವಿರ ಆದಾಯ ಮಿತಿ ನಿಗದಿ ಮಾಡಿದ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.  

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದಾಯ ಮಿತಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಪರಿಹಾರ ಆಗಲಿದೆ ಎಂದರು. 

ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ಆರತಿ ಸೋಮಯ್ಯ ಅವರು ಮಾತನಾಡಿ ಎಸ್‍ಎಸ್‍ಎಲ್‍ಸಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವಂತಾಗಬೇಕು. ಇದರಿಂದ ವಿಶೇಷಚೇತನ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕಾರಿಯಾಗಲಿದೆ ಎಂದರು.  

ವಿಶೇಷಚೇತನರೊಬ್ಬರು ಮಾತನಾಡಿ ವಿಶೇಷಚೇತನರಿಗೆ ಬಸ್‍ಗಳಲ್ಲಿ ಪ್ರತ್ಯೇಕ ಆಸನ ಇದ್ದರೂ ಸಹ, ಯಾರೂ ಆಸನ ಬಿಟ್ಟುಕೊಡುವುದಿಲ್ಲ. ಮಾನವೀಯತೆ ಇಲ್ಲದ ವರ್ತನೆ ಕಾಣುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. 

ಬೇಟೋಳಿಯ ಆಯಿಷಾ ಅವರು ಮಾತನಾಡಿ ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷಚೇತನರಿಗೆ ಪ್ರಥಮ ಆದ್ಯತೆಯಲ್ಲಿ ಚಿಕಿತ್ಸೆ ನೀಡಬೇಕು. ಇವರನ್ನು ಯಾವುದೇ ಕಾರಣಕ್ಕೂ ಕಾಯಿಸಬಾರದು ಎಂದು ಕೋರಿದರು. 

ಮೂರ್ನಾಡು ಗ್ರಾಮದ ವಿಶೇಷಚೇತನರು ಒಬ್ಬರು ಮಾತನಾಡಿ ಮನೆ/ನಿವೇಶನ ಇಲ್ಲದ ವಿಶೇಷಚೇತನರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.  

ಪಾಲಿಬೆಟ್ಟದ ಗೀತಾ ಚಂಗಪ್ಪ, ಶಿವರಾಜ್ ಅವರು ವಿಶೇಷಚೇತನರ ಕುಂದುಕೊರತೆ ಬಗ್ಗೆ ಗಮನ ಸೆಳೆದರು. ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭಿª=ವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಮಂಗಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. 

ಸ್ವಾಮಿ ವಿವೇಕಾನಂದ ಯುವ ಸಂಸ್ಥೆಯ ಅಂಕಾಚಾರಿ ಅವರು ಮಾತನಾಡಿ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಸಮುದಾಯ ಪುನರ್ವಸತಿ ಕೇಂದ್ರ’ ಹಾಗೂ ಮಡಿಕೇರಿಯ ತಾಲ್ಲೂಕು ಪಂಚಾಯತ್ ಕಚೇರಿಯ ಹತ್ತಿರದ ‘ಪುನರ್ವಸತಿ ಸಂಪನ್ಮೂಲ ಕೇಂದ್ರ’ದಲ್ಲಿ ವಿಶೇಷಚೇತನರಿಗೆ ಫಿಸಿಯೋಥೆರಪಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಹಲವು ವಿಶೇಷಚೇತನರು ಸಭೆಯಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸಿ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0