ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 21ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

Aug 29, 2026 - 09:31
 0  69
ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 21ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಸಿದ್ದಾಪುರ:- ತಿತಿಮತಿ ವಲಯದ ಚೆನ್ನಂಗಿ ಶಾಖೆ ವ್ಯಾಪ್ತಿಯ ವಿವಿಧ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೃಷಿ ಬೆಳೆಗಳನ್ನು ನಾಶಪಡಿಸುತ್ತಿದ್ದ 21ಕ್ಕೂ ಹೆಚ್ಚು ಕಾಡಾನೆಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ದುಬಾರೆ ಮೀಸಲು ಅರಣ್ಯಕ್ಕೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಮೇಕೂರು, ಹೊಸ್ಕೇರಿ, ಬಾಡಗಬಾಣಂಗಾಲ ಹಾಗೂ ಕೊಡಗು-ಶ್ರೀರಂಗಪಟ್ಟಣ ಗ್ರಾಮದ ಪಾರ್ವತಿ ಎಸ್ಟೇಟ್, ಬಿ.ಕಾನನ ಕಾಡ್ ಎಸ್ಟೇಟ್,ಮಾರ್ಗೋಳ್ಳಿ ಎಸ್ಟೇಟ್ ಸೇರಿದಂತೆ ವಿವಿಧ ಖಾಸಗಿ ಕಾಫಿ ತೋಟಗಳಲ್ಲಿ ಪ್ರತ್ಯೇಕ ಎರಡು ಹಿಂಡುಗಳಲ್ಲಿ ಸುಮಾರು ಐದು ಮರಿ ಆನೆಗಳು ಸೇರಿದಂತೆ 21ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದವು ಆನೆಗಳು ಅಡಿಕೆ, ತೆಂಗು, ಕಾಫಿ ಹಾಗೂ ಬಾಳೆ ಬೆಳೆಗಳನ್ನು ನಾಶಪಡಿಸುತ್ತಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ಕೃಷಿ ನಷ್ಟ ಸಂಭವಿಸಿತ್ತು ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರ ಸೂಚನೆ ಮೇರೆಗೆ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನಿತಾ ಚೌಹನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಅವರ ನಿರ್ದೇಶನದಲ್ಲಿ, ವಲಯ ಅರಣ್ಯಾಧಿಕಾರಿ ರಾಕೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಚೆನ್ನಂಗಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಅವರ ನೇತೃತ್ವದ ತಂಡ ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸಿತು ಕಾರ್ಯಾಚರಣೆಯಲ್ಲಿ ಇಟಿಎಫ್ ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ಆರ್‌ಆರ್‌ಟಿ ತಂಡದ ಶಂಕರ್, ಪ್ರಜ್ವಲ್, ರಂಜೀತ್, ಸುಂದರ, ಪ್ರವೀಣ, ರೋಶನ್, ಆಕಾಶ್, ಪ್ರದೀಪ್, ಧನು ಹಾಗೂ ಅರುಣ, ಇಟಿಎಫ್ ಸಿಬ್ಬಂದಿಗಳಾದ ರಂಜನ್, ಕೇಶವ, ಮನು, ಪ್ರದೀಪ್, ವಿನೋದ್ ಸೇರಿದಂತೆ ವನ್ಯಜೀವಿ ಹಾಗೂ ಟಾಟಾ ಕಾಫಿಯ ಟ್ರ್ಯಾಕರ್‌ಗಳು ಭಾಗವಹಿಸಿದ್ದರು.

ದುಬಾರೆ ಮೀಸಲು ಅರಣ್ಯಕ್ಕೆ ಹಿಮ್ಮೆಟ್ಟಿಸಲಾದ ಕಾಡಾನೆಗಳ ಹಿಂಡು ರಾತ್ರಿ ವೇಳೆ ಮತ್ತೆ ಕಾಡಿನಿಂದ ಹೊರಬಂದು ಕಾಫಿ ತೋಟಗಳಿಗೆ ಲಗ್ಗೆ ಇಡುವ ಆತಂಕ ಮುಂದುವರಿದಿದೆ ಇದರಿಂದ ಅಪಾರ ಪ್ರಮಾಣದ ಕೃಷಿ ನಷ್ಟವಾಗುತ್ತಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಹಾಗೂ ತೋಟದ ಮಾಲೀಕರು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು ಅರಣ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಕಾಡಾನೆಗಳ ಸಂಚಾರದ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0