ವಿರಾಜಪೇಟೆ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ: ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್‌ಗಣಪತಿ

Aug 16, 2026 - 16:15
 0  103
ವಿರಾಜಪೇಟೆ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ: ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್‌ಗಣಪತಿ

ಗೋಣಿಕೊಪ್ಪ: ಅಮ್ಮತ್ತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ವಿರಾಜಪೇಟೆ ಉಪವಲಯ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲು ವಿರಾಜಪೇಟೆ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್‌ಗಣಪತಿ ತಿಳಿಸಿದ್ದಾರೆ.

ಅಮ್ಮತ್ತಿ ವ್ಯಾಪ್ತಿಯ ಕಾವಾಡಿ, ಹೆಚ್ಚಿನಾಡು, ಬೈರಂಭಾಡ, ಕಣ್ಣಂಗಾಲ, ಹಾಲುಗುಂದ, ಯಡೂರು, ಚಿಕ್ಕನಹಳ್ಳಿ, ಗುಹ್ಯ, ಸಿದ್ದಾಪುರ, ಪುಲಿಯೇರಿ, ಅಮ್ಮತ್ತಿ ಹಾಗೂ ಕರಡಿಗೋಡು ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಸುಮಾರು ಮೂರು ಕಾಡಾನೆಗಳು ನಿರಂತರವಾಗಿ ಸಂಚರಿಸುತ್ತಿದ್ದು, ಕೆಲವೊಮ್ಮೆ ಗ್ರಾಮಗಳಲ್ಲೇ ಬೀಡುಬಿಟ್ಟು ಸಾರ್ವಜನಿಕರು ಹಾಗೂ ರೈತರಿಗೆ ತೊಂದರೆ ಉಂಟುಮಾಡುತ್ತಿವೆ. ಕಾಡಾನೆಗಳಿಂದ ಬೆಳೆ ನಾಶವಾಗುವುದರ ಜೊತೆಗೆ ವಾಹನಗಳಿಗೆ ಹಾನಿ ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸಲು ಯತ್ನಿಸಿದ ಘಟನೆಗಳೂ ವರದಿಯಾಗಿವೆ.

ಕಾಡಾನೆ ದಾಳಿಗೆ ಬಲ್ಲಚಂಡ ಸುಬ್ರಮಣಿ ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಸೆರೆಹಿಡಿದು, ಮಾನವ ವಸತಿ ಪ್ರದೇಶಗಳಿಂದ ದೂರವಿರುವ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಬಿಜೆಪಿ ಮಂಡಲದ ವತಿಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಆನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಿದ್ದು, ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ವಿರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಎಸಿಎಫ್ ತಶೀನಾ ಭಾನು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಸುವಿನ್ ಗಣಪತಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0