Kodagu

ಸುಂಟಿಕೊಪ್ಪ ಭಾನುವಾರ ಸಂತೆಗೆ ತಡೆ ಇಲ್ಲ: ಶಾಸಕ ಡಾ. ಮಂತರ್ ಗೌಡ

admincoorgdaily

ಸುಂಟಿಕೊಪ್ಪ ಭಾನುವಾರ ಸಂತೆಗೆ ತಡೆ ಇಲ್ಲ: ಶಾಸಕ ಡಾ. ಮಂತರ್ ಗೌಡ

ಸುಂಟಿಕೊಪ್ಪ: ಆಗಸ್ಟ್ 16 ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಡಿಕೇರಿ ಮತ್ತು ಭಾಗಮಂಡಲಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ವಾರದ ಸಂತೆಗೆ ತಡೆ ಹಾಕುವಂತೆ ಅಧಿಕಾರಿಗಳು ಸೂಚಿಸಿದ್ದರು. ರಸ್ತೆ ಸುರಕ್ಷತೆ ಮತ್ತು ಭದ್ರತೆಯ ಕಾರಣ ನೀಡಿ ಸಂತೆಯನ್ನು ಸೋಮವಾರಕ್ಕೆ ಬದಲಾಯಿಸಲು ಪ್ರಸ್ತಾವನೆ ಬಂದಿತ್ತು. ಇದರಿಂದ ಸ್ಥಳೀಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ವಿಷಯ ತಿಳಿದ ಕೂಡಲೇ ಮಧ್ಯಪ್ರವೇಶಿಸಿದ ಶಾಸಕ ಡಾ. ಮಂತರ್ ಗೌಡ ಅವರು ಎಸ್ಪಿ, ಇಒ ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು. "ಇತಿಹಾಸದಿಂದ ನಡೆದುಕೊಂಡು ಬರುತ್ತಿರುವ ಸುಂಟಿಕೊಪ್ಪದ ಭಾನುವಾರದ ಸಂತೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸಂತೆಯನ್ನು ನಡೆಸಲಾಗುವುದು" ಎಂದು ತಿಳಿಸಿದರು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಸ್ವಲ್ಪ ಒಳಗೆ ಬಂದು ವ್ಯಾಪಾರ ಮಾಡಬೇಕು.

ಪ್ರಯಾಣಿಕರಿಗೆ, ಚಾಲಕರಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯಾಗದಂತೆ ಬಂದೋಬಸ್ತ್ ಮಾಡಲಾಗುವುದು ಎಂದು ಅವರು ಹೇಳಿದರು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ತಮ್ಮ ಉದ್ದೇಶವಾಗಿದ್ದು, ಭಾನುವಾರದ ಸಂತೆ ಎಂದಿನಂತೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು. ಈ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್,ಸುಂಟಿಕೊಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷ ರಫೀಕ್ ಖಾನ್ ಇದ್ದರು.