ಮೂವರು ಡ್ರಗ್ಸ್ ಪೆಡ್ಲರ್ಗಳು ಅರೆಸ್ಟ್; 11.90 ಲಕ್ಷ ರೂ. ಮೌಲ್ಯದ MDMA ವಶ
admincoorgdaily

ಮಂಗಳೂರು, ಫೆ14: ಮಂಗಳೂರು (Mangalore) ನಗರದಲ್ಲಿ ಮಾದಕ ವಸ್ತುಗಳ ಜಾಲದ (Drugs Mafia) ವಿರುದ್ಧ ಕಠಿಣ ಕ್ರಮ ಮುಂದುವರೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು ಮತ್ತೊಮ್ಮೆ ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಂಗಳೂರು ತಾಲೂಕಿನ ತಲಪಾಡಿ ಭಾಗದಲ್ಲಿ ದಾಳಿ ನಡೆಸಿ MDMA ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲದ ಮುಸ್ತಫಾ ಸೀದಿಯಬ್ಬ (34), ಮೈಯದ್ದಿ (28) ಮತ್ತು ಮೊಹಮ್ಮದ್ ಶಿಫಾನ್ (28) ಎಂದು ಗುರುತಿಸಲಾಗಿದೆ.
ಇವರು ಬೆಂಗಳೂರಿನಿಂದ ಎಂಡಿಎಂಎ ತಂದು ಮಂಗಳೂರಿನ ತಲಪಾಡಿ ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ ಸುಮಾರು 11.90 ಲಕ್ಷ ರೂ. ಮೌಲ್ಯದ 118.13 ಗ್ರಾಂ MDMA ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಈ ಡ್ರಗ್ಸ್ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಮುಂದುವರೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಹೆಚ್ಚುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಡಿಸೆಂಬರ್‌ನಲ್ಲಿ ಮಂಗಳೂರಿನ ಮುಲ್ಕಿ ಬಳಿ 50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡು ನಾಲ್ವರನ್ನು ಸೆರೆಹಿಡಿಯಲಾಗಿತ್ತು. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾರಾಟಕ್ಕೆಂದು ಒಡಿಶಾದಿಂದ ತಂದಿದ್ದ 21 ಕೆಜಿ ಗಾಂಜಾವನ್ನು ಸುರತ್ಕಲ್ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಭೇದಿಸಿದ್ದರು.
ಅತ್ತ ಬೆಂಗಳೂರಿನಲ್ಲಿ ಸಹ ಜನವರಿಯಲ್ಲಿ ಪೊಲೀಸರು ಸುಮಾರು 4 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಎಂಡಿಎಂಎ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿದ್ದರು.