ಭೀಕರ ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಮೃತ್ಯು
admincoorgdaily
ಕಲಬುರಗಿ, ನ. 25: ಕಲಬುರಗಿ ರಸ್ತೆ ಮಾರ್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಈ ಅವಘಡ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ವಿಜಯಪುರದಿಂದ ಕಲಬುರಗಿಗೆ ಹೊರಟಿದ್ದ ಇನ್ನೋವಾ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಗೌನಳ್ಳಿ ಕ್ರಾಸ್ ಸಮೀಪ ಕಾರಿನ ಮುಂದೆ ನಾಯಿ ಅಡ್ಡ ಬಂದ ಸಂದರ್ಭದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ವಾಹನ ರಸ್ತೆ ಬದಿಗೆ ಜಾರಿಕೊಂಡು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮಹಾಂತೇಶ್ ಬೀಳಗಿ, ಮತ್ತಿಬ್ಬರು ಸಹೋದ್ಯೋಗಿಗಳು ಮೃತಪಟ್ಟರೆ, ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾಂತೇಶ್ ಬೀಳಗಿ ಅವರು ದಾವಣಗೆರೆ, ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದ ಅನುಭವಿ ಆಡಳಿತಾಧಿಕಾರಿಯಾಗಿದ್ದರು.