ಪಾಲಿಬೆಟ್ಟ ಸಮೀಪ ಎಸ್ಟೇಟ್‌ನಲ್ಲಿ ಹುಲಿ ಪತ್ತೆ; ಕಾರ್ಮಿಕರಲ್ಲಿ ಆತಂಕ

Mar 28, 2026 - 22:04
 0  955
ಪಾಲಿಬೆಟ್ಟ ಸಮೀಪ ಎಸ್ಟೇಟ್‌ನಲ್ಲಿ ಹುಲಿ ಪತ್ತೆ; ಕಾರ್ಮಿಕರಲ್ಲಿ ಆತಂಕ
Tiger (ಸಾಂದರ್ಭಿಕ ಚಿತ್ರ)

ಪಾಲಿಬೆಟ್ಟ; ಸಮೀಪದ ಕೈಮಕಾಡು ಭಾಗದ ಎಸ್ಟೇಟ್ ಪ್ರದೇಶದಲ್ಲಿ ಹುಲಿ ಪತ್ತೆಯಾಗಿರುವ ಘಟನೆ ತೋಟದ ಕಾರ್ಮಿಕರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ. ಶನಿವಾರ ಬೆಳಿಗ್ಗೆ ಸೌದೆಗೆಂದು ತೋಟದೊಳಗೆ ತೆರಳಿದ್ದ ಕೆಲ ಕಾರ್ಮಿಕರು ಏಕಾಏಕಿ ಹುಲಿಯ ಘರ್ಜನೆ ಕೇಳಿ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಘಟನೆ ಬಳಿಕ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಹುಲಿಯ ಚಲನೆಯನ್ನು ಪತ್ತೆಹಚ್ಚಲು ಸಿಬ್ಬಂದಿ ತಂಡಗಳು ಎಸ್ಟೇಟ್ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ತೋಟದ ಕಾರ್ಮಿಕರು ಮತ್ತು ಗ್ರಾಮಸ್ಥರು ಭಯಭೀತರಾಗಿದ್ದು, ಮಕ್ಕಳನ್ನು ಹೊರಗೆ ಬಿಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಅರಣ್ಯ ಇಲಾಖೆ ಕೂಡ ಜನರಿಗೆ ಎಚ್ಚರಿಕೆ ನೀಡಿ, ಒಬ್ಬರೇ ತೋಟ ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಿದೆ. ಹುಲಿ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆ, ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಜನರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 1