ಇಂದು ಕಡಂಗದಲ್ಲಿ 07 ಬಡ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ

Apr 11, 2026 - 06:49
 0  158
ಇಂದು ಕಡಂಗದಲ್ಲಿ 07 ಬಡ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ

ಮಡಿಕೇರಿ; ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಡ, ಅನಾಥ ಹೆಣ್ಣುಮಕ್ಕಳ ಪಾಲಿನ ಆಶಾಕಿರಣವಾಗಿ ಕಡಂಗ ಗ್ರಾಮದ ಎಸ್.ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಕಾರ್ಯನಿರ್ವಹಿಸುತ್ತಾ ಬಂದಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ಮದುವೆ ಸಾಧ್ಯವಾಗದಿರುವ ಮುಸ್ಲಿಂ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತವಾಗಿ ವಿವಾಹ ಮಾಡಿಕೊಡುವುದರ ಮೂಲಕ ಮಾನವೀಯತೆ ಮೆರೆದಿದೆ. ಕಳೆದ ಮೂರು ವರ್ಷಗಳಿಂದ ಕಡಂಗದಲ್ಲಿ ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹವನ್ನು ನೆರವೇರಿಸುತ್ತಾ ಬಂದಿದ್ದು, ಮೊದಲ ವರ್ಷ ಒಂದು, ಎರಡನೇ ಮತ್ತು ಮೂರನೇ ವರ್ಷ ತಲಾ ಐದು ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ಮದುವೆ ನಡೆಸಿಕೊಟ್ಟಿರುವ ಎಸ್.ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ಕಡಂಗ ಶಾಖೆಯು ಪ್ರಸಕ್ತ ವರ್ಷ 7 ಬಡ ಹೆಣ್ಣುಮಕ್ಕಳಿಗೆ ವಿವಾಹ ನಡೆಸಿಕೊಡಲು ಸಿದ್ಧತೆ ನಡೆಸಿದೆ. ಇಂದು ಶನಿವಾರ ಕಡಂಗದಲ್ಲಿ ವಿವಾಹ ಕಾರ್ಯಕ್ರಮ ಹಾಗೂ ಧಾರ್ಮಿಕ ಭಾಷಣ ಕಾರ್ಯಕ್ರಮ ನಡೆಯಲಿದೆ.

ಸಂಪೂರ್ಣ ಖರ್ಚು ವೆಚ್ಚ;

ಪ್ರಸ್ತುತ ದಿನಗಳಲ್ಲಿ ಚಿನ್ನಾಭರಣದ ದರ ಗಗನಕ್ಕೇರುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಚಿನ್ನ ಕೈಗೆಟುಕದಷ್ಟು, ದಿನದಿಂದ ದಿನಕ್ಕೆ ದರ ಏರಿಕೆಯಾಗುತ್ತಿದೆ. ಆದರೆ ಎಸ್.ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್‍ಎಫ್. ಕಡಂಗ ಶಾಖೆಯು ವಿವಾಹ ಪ್ರಾಯವಾಗಿರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಖರ್ಚಿಲ್ಲದೆ ಕಳೆದ ಮೂರು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಮೊದಲು ಅರ್ಜಿ ಆಹ್ವಾನ ಮಾಡಿ, ಅರ್ಜಿ ಹಾಕಿದವರ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ ನಂತರ ಮಾತ್ರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅತ್ಯಂತ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆ. ಅದಲ್ಲದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳಿಗೆ ಚಿನ್ನಾಭರಣ, ಬಟ್ಟೆ, ಎಲ್ಲಾ ಖರ್ಚು ವೆಚ್ಚಗಳನ್ನು ಶಾಖೆ ಭರಿಸುತ್ತದೆ.

ವೇದಿಕೆಯಲ್ಲಿ ಹೆಣ್ಣಿನ ತಂದೆ ಅಥವಾ ಕುಟುಂಬಸ್ಥರಿಗೆ ಗಣ್ಯರ ಸಮ್ಮುಖದಲ್ಲಿ ಚಿನ್ನವನ್ನು ಹಸ್ತಾಂತರ ಮಾಡುತ್ತಾರೆ. ಮದುಮಗನಿಗೂ ಕೂಡ ಬಟ್ಟೆಯನ್ನು ಉಚಿತವಾಗಿ ನೀಡುತ್ತಾರೆ. ವಿಶೇಷವಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಹೆಣ್ಣು ಮತ್ತು ಗಂಡಿನ ಕಡೆಯ ಎಲ್ಲರಿಗೂ ಉಚಿತವಾಗಿ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ. ತಾ. 11 ರಂದು ಕಡಂಗದಲ್ಲಿ 7 ಬಡ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೆರವೇರಲಿದೆ. ಶನಿವಾರ ಸಂಜೆ ಕಡಂಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎಂ ಅಬ್ದುಲ್ಲಾ ಫೈಝಿ ಉದ್ಘಾಟನೆ ಮಾಡಲಿದ್ದು, ನಿಖಾಹ್ ನೇತೃತ್ವವನ್ನು ಸಯ್ಯಿದ್ ಮುಹಮ್ಮದ್ ಕೋಯ ತಂಙಲ್ ಜಮಲುಲೈಲಿ ವಹಿಸಲಿದ್ದಾರೆ. ಸಂಜೆ ಏಳು ಗಂಟೆಗೆ ನಡೆಯುವ ಧಾರ್ಮಿಕ ಭಾಷಣವನ್ನು ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ನಡೆಸಲಿದ್ದಾರೆ. -

ಕೆ.ಎಂ. ಇಸ್ಮಾಯಿಲ್ ಕಂಡಕರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0