ಮಾಲ್ದಾರೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಗೋರಿ ನಿರ್ಮಾಣ ಪ್ರಕರಣ:ಎಂಟು ಮಂದಿ ಅರೆಸ್ಟ್
ಮಡಿಕೇರಿ: ಮಲ್ದಾರೆ ಸಮೀಪದ ಮೀಸಲು ಅರಣ್ಯ ಪ್ರದೇಶದೊಳಗೆ ಇರುವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಜೂನ್ 26 ರಂದು ದೇವಾಲಯದ ಆವರಣದಲ್ಲಿ ಯಾರೋ ಅನ್ಯಕೋಮಿನವರು ಗೋರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದವು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮತ್ತು ಮಡಿಕೇರಿ ಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಸಿಐ ಚಂದ್ರಶೇಖರ್ ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು.
ತನಿಖೆ ವೇಳೆ ಪಿರಿಯಾಪಟ್ಟಣ ತಾಲೂಕಿನ ಆಯಾರಬೀಡು ಗ್ರಾಮದ ನಿವಾಸಿಗಳಾದ ಮುಜಾಮಿಲ್ (32),ಅಶ್ವಿಕ್ ಪಾಷ (28),ರಶೀದ್ ಖಾನ್ (30),ಸೈಯದ್ ಸಾಧಿಕ್ (34),ಆಲಂ ಶರೀಫ್ (19),ತಂಜೀರ್ ಪಾಷ (30),ಮನ್ಸೂರ್ ಪಾಷ (33) ನಿಸಾರ್ ಅಹ್ಮದ್ (33),ಈ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ದೇವಾಲಯಕ್ಕೆ ಆಗಮಿಸಲು ಬಂದಿದ್ದ 2 ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಒತ್ತಾಯಿಸಿದ್ದವು. ಇದರಂತೆ ಅರಣ್ಯ ಇಲಾಖೆಯು ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ.ಅಲ್ಲದೆ 2 ಅರಣ್ಯ ಸಿಬ್ಬಂದಿಯನ್ನು ಹಗಲು ಗಸ್ತು ಮತ್ತು ಕಾವಲಿಗೆ ನಿಯೋಜಿಸಲಾಗಿದೆ. ರಾತ್ರಿ ವೇಳೆ ಅರಣ್ಯ ವಾಹನದಲ್ಲಿ ಗಸ್ತು ತಿರುಗಲು ಇನ್ನೂ 2 ಸಿಬ್ಬಂದಿಯನ್ನು ನೇಮಿಸಲಾಗಿದೆ.
ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕೂಡ ಕೆಲವರ ವಿರುದ್ಧ ಪ್ರತ್ಯೇಕವಾಗಿ ಮೊಕದ್ದಮೆ ದಾಖಲಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
