ತುಮಕೂರು: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಶಬರಿಮಲೆಯಿಂದ ವಾಪಸ್ಸಾಗುತ್ತಿದ್ದ ನಾಲ್ವರು ಸಾವು

Jan 9, 2026 - 20:19
 0  700
ತುಮಕೂರು: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಶಬರಿಮಲೆಯಿಂದ ವಾಪಸ್ಸಾಗುತ್ತಿದ್ದ ನಾಲ್ವರು ಸಾವು
ಸಾಂದರ್ಭಿಕ ಚಿತ್ರ

ತುಮಕೂರು, ಜ. 9: ತುಮಕೂರು ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾದ ಪರಿಣಾಮ, ಶಬರಿಮಲೆ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬ ಬಾಲಕಿ ಸೇರಿದ್ದಾಳೆ. ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನಿವಾಸಿಗಳೆಂದು ಗುರುತಿಸಲಾಗಿದೆ. ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತರು. ಗಾಯಗೊಂಡವರಾಗಿ ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24), ತಿರುಪತಿ (33) ಮತ್ತು ಶ್ರೀನಿವಾಸ್ (32) ಇದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆಯ ಅಯ್ಯಪ್ಪ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್‌ನಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಮಗಳನ್ನು ಕಳೆದುಕೊಂಡ ತಂದೆಯ ಆಕ್ರಂದನ 

ಅಪಘಾತದಲ್ಲಿ ಮಗಳನ್ನು ಕಳೆದುಕೊಂಡ ತಂದೆ ಉಲಗಪ್ಪ ದುಃಖ ವ್ಯಕ್ತಪಡಿಸಿದರು. “ಜನವರಿ 5ರಂದು ಶಬರಿಮಲೆಗೆ ತೆರಳಿದ್ದೆವು. ದೇವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಎಂಬುದು ಗೊತ್ತಾಗಲಿಲ್ಲ,” ಎಂದು ಅವರು ಕಣ್ಣೀರಿಟ್ಟರು. ಸಾಕ್ಷಿ ಪ್ರಥಮ ತರಗತಿಯಲ್ಲಿ ಓದುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿಯಂತೆ, ಮಾಲಾಧಾರಿಗಳು ಜನವರಿ 7ರಂದು ಶಬರಿಮಲೆಗೆ ತಲುಪಿದ್ದು, ಬುಧವಾರ ಅಯ್ಯಪ್ಪನ ದರ್ಶನ ಪಡೆದಿದ್ದರು. ಬಳಿಕ ಗುರುವಾರ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಬೆಂಗಳೂರು–ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0