CRIME

ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ: ಕೊಡಗಿನ ಇಬ್ಬರ ಬಂಧನ

admincoorgdaily

ಚಿತ್ರ1 ಇರ್ಷಾದ್, ಚಿತ್ರ2 ಮುಸ್ತಫಾ ,ಚಿತ್ರ3 ನಿಮಿಲ್

ಪಣಂಬೂರು: ಮಹಾರಾಷ್ಟ್ರದಿಂದ ಕೇರಳದ ಪೈನ್ನೂರಿಗೆ ಕುಟುಂಬದೊಂದಿಗೆ ತೆರಳುತ್ತಿದ್ದ ವಿಕಾಸ್ ಸುಬ್ಬುರಾವ್‌ ಧನವಡೆ ಅವರನ್ನು ಜೂ.29ರಂದು ಅಪಹರಿಸಿ, ಕಾರು ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಕ್ಕೇರಿ ನಿವಾಸಿ ನಿಮಿಲ್ ಆರ್.ಕೆ. (37), ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವಾಗಿದ್ದ ಕೊಡಗು ಜಿಲ್ಲೆಯ ಹಾಕ್ಕತ್ತೂರು ನಿವಾಸಿ ಇರ್ಷಾದ್ (40) ಹಾಗೂ ಕೃತ್ಯಕ್ಕೆ ಕಾರು ಒದಗಿಸಿದ್ದ ಮಡಿಕೇರಿ ನಿವಾಸಿ ಮುಸ್ತಫ (49) ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಕಾರುಗಳ ಪೈಕಿ ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು, ಆರೋಪಿಗಳಿಗೆ ಸಹಕರಿಸಿದ್ದ ಇಬ್ಬರು ಸೇರಿ 16 ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಎಲ್ಲಾ ಆರೋಪಿಗಳು ಕೇರಳ ಮತ್ತು ಕೊಡಗು ಜಿಲ್ಲೆಯವರೆಂದು ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದಾರೆ. ಸದ್ಯ ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ಕೇರಳದ ಕಣ್ಣೂರು ಜಿಲ್ಲೆಯ ಚಾಲ ಪ್ರದೇಶದಲ್ಲಿ ಆರೋಪಿ ನಿಮಿಲ್‌ನನ್ನು ಪಣಂಬೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ಬಂಧಿಸಿದೆ. ಕೊಡಗಿನ ಮಡಿಕೇರಿ ಸಮೀಪದ ಮೂರ್ನಾಡು ಜಂಕ್ಷನ್ ಬಳಿ ಲಯನ್ಸ್ ಕ್ಲಬ್ ಸಮೀಪದಿಂದ ಆರೋಪಿ ಮುಸ್ತಫನನ್ನು ಪಿಎಸ್‌ಐ ಜ್ಞಾನಶೇಖರ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮತ್ತು ನಗರ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್, ಪಿಎಸ್‌ಐ ಶ್ರೀಕಲಾ ಕೆ.ಟಿ., ಜ್ಞಾನಶೇಖರ, ಸಿಸಿಬಿ ಘಟಕಗಳ ಪಿಎಸ್‌ಐಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕೇರಳ ಮೂಲದ ಪೈಯ್ಯನೂರು ನಿವಾಸಿ ವಿಕಾಸ್ ಸುಬ್ಬುರಾವ್‌ ಧನವಡೆ ಅವರು ತನ್ನ ಕುಟುಂಬ ಸಮೇತರಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಸ್ನೇಹಿತರೊಬ್ಬರ ಮದುವೆಗೆ ಹೋಗಿ ಹಿಂದುರುಗುತ್ತಿದ್ದ ವೇಳೆ ಸುಮಾರು 7-8 ಮಂದಿ ಮುಸುಕು ದಾರಿಗಳ ತಂಡ ಅವರನ್ನು ಸುರತ್ಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯ ಬೈಕಂಪಾಡಿ ದ್ವಾರ ಹೋಟೆಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳಲ್ಲಿ ಬಂದು ತಡೆದು ಅವರು ಮತ್ತು ಅವರ ಪತ್ನಿ ಮಗನನ್ನು ಕಾರಿನಿಂದ ಇಳಿಸಿ ಕಾರು ಸಹಿತ 180 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿತ್ತು.

ಈ ಕುರಿತು ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಪತ್ತೆಗೆ ಮುಂದಾದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾ‌ರ್ ರೆಡ್ಡಿ ನೇತೃತ್ವದ ತಂಡ ಸುಮಾರು ಮೂರು ತಂಡಗಳನ್ನು ಮಾಡಿ ತನಿಖೆ ಆರಂಭಿಸಿತ್ತು. ತನಿಖೆ ಆರಂಭಿಸಿದ್ದ ಪೊಲೀಸ್‌ ತಂಡ ಬಂಟ್ವಾಳದಲ್ಲಿ ದರೋಡೆ ಕೋರರು ಕದ್ದೋಗಿದ್ದ ಸಂತ್ರಸ್ತ ವಿಕಾಸ್ ಅವರ ಕಾರನ್ನು ಪತ್ತೆ ಹಚ್ಚಿತ್ತು.