ಜಂಬೂರು ಎಸ್ಟೇಟ್ ನಲ್ಲಿ ಮರ ಬಿದ್ದು ಇಬ್ಬರು ಕಾರ್ಮಿಕರು ದುರ್ಮರಣ ಪ್ರಕರಣ:5 ಲಕ್ಷ ಪರಿಹಾರ ನೀಡಲು ಪ್ರಸ್ತಾವನೆ
ಸೋಮವಾರಪೇಟೆ ;ತಾಲೂಕಿನ ಟಾಟಾ ಕಾಫಿ ಲಿಮಿಟೆಡ್ ಜಂಬೂರು ಎಸ್ಟೇಟ್‌ನ ಓಲ್ಡ್ ಲೈನ್ ಡಿವಿಷನ್‌ನಲ್ಲಿ 29.07.2026 ರಂದು ಸುರಿದ ಗಾಳಿ-ಮಳೆಗೆ ಮರ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನಾ ಸ್ಥಳಕ್ಕೆ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು 30.07.2026 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರಿಯ ಕಾರ್ಮಿಕ ನಿರೀಕ್ಷಕರು ಸೋಮವಾರಪೇಟೆ ವೃತ್ತದ ಶಶಿಧರ್ ಎಸ್, ಪ್ರಭಾರ ಕಾರ್ಮಿಕ ಅಧಿಕಾರಿಗಳಾದ ಎಂ.ಎಂ. ಯತ್ನಾಟ್ಟಿಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಶೀರಾಜ್ ಅಹ್ಮದ್ ರವರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಮೃತ ಕಾರ್ಮಿಕರಿಗೆ ಮತ್ತು ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಎಸ್ಟೇಟ್ ಆಡಳಿತ ವರ್ಗಕ್ಕೆ ನಿರ್ದೇಶನ ನೀಡಲಾಯಿತು. ಈ ವೇಳೆ ಹಾಜರಿದ್ದ ಎಸ್ಟೇಟ್ ಆಡಳಿತ ವರ್ಗದವರು, ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಲು ಈಗಾಗಲೇ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಧಿಕಾರಿಗಳು ಆಡಳಿತ ವರ್ಗಕ್ಕೆ ಸೂಚನಾ ಪತ್ರ ಜಾರಿಗೊಳಿಸಿ, ಗಾಯಾಳು ಕಾರ್ಮಿಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಿ ಅವರ ಹಿತವನ್ನು ಕಾಪಾಡಿಕೊಂಡು ಹೋಗುವಂತೆ ಸೂಚಿಸಿದರು. ನಂತರ ಅಧಿಕಾರಿಗಳು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕಾರ್ಮಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಅವರಿಗೆ ಧೈರ್ಯ ತುಂಬಿದ ಅಧಿಕಾರಿಗಳು, ಕಂಪನಿಯ ಎಸ್ಟೇಟ್ ಆಡಳಿತ ವರ್ಗದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಾಯಾಳು ಕಾರ್ಮಿಕರೊಂದಿಗೆ ಇದ್ದ ಸಂಬಂಧಿಕರಿಗೆ, ಯಾವುದೇ ರೀತಿಯ ತೊಂದರೆಗಳಿದ್ದರೆ ಕೂಡಲೇ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವಂತೆ ತಿಳುವಳಿಕೆ ನೀಡಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
