ಯೂನಿಕ್ ಬಾಯ್ಸ್ ಅಂಡರ್ 18 ಕಬಡ್ಡಿ ಪಂದ್ಯಾವಳಿ: ಎಸ್.ಬಿ.ಸಿ (ಬಿ) ಸಿದ್ದಾಪುರ ಚಾಂಪಿಯನ್
ವಿರಾಜಪೇಟೆ:ಯೂನಿಕ್ ಬಾಯ್ಸ್ ವಿರಾಜಪೇಟೆ, ತೋರ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ 18 ವರ್ಷ ಒಳಗಿರುವ ಬಾಲಕರ ತಾಲೂಕು ಮಟ್ಟದ ನಾಕ್ ಔಟ್ ಮಾದರಿಯ ಕಬಡ್ಡಿ ಪಂದ್ಯಾಟ ನಗರದ ತಾಲೂಕು ಮೈದಾನದಲ್ಲಿ ನಡೆಯಿತು. ವಿರಾಜಪೇಟೆ, ಪೊನ್ನಂಪೇಟೆ, ಸಿದ್ದಾಪುರ, ಅಭ್ಯತ್ ಮಂಗಲ, ಮಡಿಕೇರಿ ಭಾಗಗಳಿಂದ ಒಟ್ಟು 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಅಂತಿಮ ಹಂತದಲ್ಲಿ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಪ್ರಥಮ ಸೆಮಿಫೈನಲ್ ಪಂದ್ಯ ಎಸ್.ಬಿ.ಸಿ. ( ಬಿ) ಸಿದ್ದಾಪುರ ಮತ್ತು ಯು. ಬಿ.ಕೆ. ತೋರ ತಂಡಗಳ ಮಧ್ಯೆ ಪಂದ್ಯಾಟ ನಡೆದು 27-15 ಅಂಕಗಳ ಅಂತರದಿಂದ ಎಸ್. ಬಿ.ಸಿ. ( ಬಿ) ತಂಡ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಪಂದ್ಯ ಎಸ್. ಬಿ.ಸಿ. ( ಎ) ಸಿದ್ದಾಪುರ ಮತ್ತು ಸೆವೆನ್ ಸ್ಟಾರ್ ವಿರಾಜಪೇಟೆ ತಂಡಗಳ ಮಧ್ಯೆ ಪಂದ್ಯ ನಡೆದು 25-11 ಅಂಕಗಳ ಅಂತರದಿಂದ ಸೆವೆನ್ ಸ್ಟಾರ್ ತಂಡವನ್ನು ಮಣಿಸಿ ಫೈನಲ್ ಗೆ ಅರ್ಹತೆ ಪಡೆಯಿತು. ಮೂರನೇ ಸ್ಥಾನದ ಪ್ರಸಸ್ತಿಗಾಗಿ ಸೆವೆನ್ ಸ್ಟಾರ್ ತಂಡ ಯು.ಬಿ.ಕೆ ತಂಡಗಳ ಮಧ್ಯೆ ಪಂದ್ಯ ನಡೆಯಿತು.
13-03 ಅಂಕಗಳಿಸಿ ಸೆವೆನ್ ಸ್ಟಾರ್ ತಂಡ ಜಯಗಳಿಸಿತು. ಫೈನಲ್ ಪಂದ್ಯಾಟವು ಸಿದ್ದಾಪುರದ ಎಸ್.ಬಿ.ಸಿ.(ಎ) ಮತ್ತು ಎಸ್.ಬಿ.ಸಿ. (ಬಿ) ತಂಡಗಳ ಮಧ್ಯೆ ನಡೆದು ಎಸ್.ಬಿ.ಸಿ. ( ಬಿ) ತಂಡ 20-10 ಅಂಕಗಳಿಸಿ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿತು.ಪಂದ್ಯಾವಳಿಯಲ್ಲಿ ಶಿವು,ಲಿವಿನ್,ಮತ್ತು ಕಾರ್ತಿಕ್ ಹಾಗೂ ನೀಕಿಲ್ ಉನ್ನಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಎಸ್.ಬಿ.ಸಿ. (ಬಿ) ಸಿದ್ದಾಪುರ ತಂಡ ಚಾಂಪಿಯನ್ ಗಿ ಹೊರಹೊಮ್ಮಿತು, ಎಸ್.ಬಿ.ಸಿ. (ಎ) ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಪಾರಿತೋಷಕ ಮತ್ತು ನಗದು ಪುರಸ್ಕಾರ ನೀಡಲಾಯಿತು. ಉತ್ತಮ ರೈಡರ್ ಎಸ್.ಬಿ.ಸಿ. ತಂಡದ ಉನ್ನಿ,ಉತ್ತಮ ಡಿಫೆಂಡರ್ ದಿಲನ್, ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಭರತ್ ಅವರುಗಳು ತಮ್ಮ ವೈಯುಕ್ತಿಕ ಬಹುಮಾನಗಳನ್ನು ಪಡೆದುಕೊಂಡರು. ಯೂನಿಕ್ ಬಾಯ್ಸ್ ಕೊಡಗು ವಿರಾಜಪೇಟೆ ತೋರ ಆಯೋಜಕರಾದ ನಿಶಾಂಕ್ ಬಿ.ಎಲ್,ಭರತ್ ಕೆ.ಅರ್. ಮೋಕ್ಷಿತ್ ಎಂ.ಸಿ. ಪ್ರಜ್ವಲ್ ಎಸ್ ಸೇರಿದಂತೆ ಸದಸ್ಯರು, ವಿವಿಧ ತಂಡಗಳ ಕ್ರೀಡಾ ಪಟುಗಳು, ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ