ವಿ.ಬಾಡಗ ಕ್ರೀಡಾ ವಸತಿ ಶಾಲೆ ಶೀಘ್ರ ಪೂರ್ಣ: ಶಾಸಕ ಎ.ಎಸ್ ಪೊನ್ನಣ್ಣ

ವಿ.ಬಾಡಗ ಕ್ರೀಡಾ ವಸತಿ ಶಾಲೆ ಶೀಘ್ರ ಪೂರ್ಣ: ಶಾಸಕ ಎ.ಎಸ್ ಪೊನ್ನಣ್ಣ

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿ.ಬಾಡಗದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರದ ಕಾಮಗಾರಿಯ ಪ್ರಗತಿಯನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಂತ ಹಂತವಾಗಿ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದು ಅವರು ಭರವಸೆ ನೀಡಿದರು.

ಕಾಮಗಾರಿ ಪರಿಶೀಲನೆ:

ಬೆಂಗಳೂರಿಗೆ ತೆರಳುವ ಮೊದಲು ನೇರವಾಗಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ ಶಾಸಕರು, ಸ್ಥಳದಲ್ಲಿ ಉಪಸ್ಥಿತರಿದ್ದ ಇಂಜಿನಿಯರ್ ಹಾಗೂ ಸ್ಥಳೀಯರಿಂದ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು. 

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ನೀಡಿದ ಅನುದಾನ ಹಾಗೂ ರಾಜ್ಯಸಭಾ ಸದಸ್ಯ ಅಜಯ್ ಮಾರ್ಕನ್ ಅವರು ನೀಡಿರುವ ಹಣಕಾಸಿನ ನೆರವಿನ ಬಗ್ಗೆ ಪ್ರಸ್ತಾಪಿಸಿದರು. ಸುಮಾರು 100 ಮಕ್ಕಳಿಗೆ ವಸತಿ ವ್ಯವಸ್ಥೆಯೊಂದಿಗೆ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ಇಲ್ಲಿ ಕ್ರೀಡಾ ತರಬೇತಿ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾವೇರಪ್ಪ, ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ, ಗಿರೀಶ್, ಸುಂದರ, ಕೋಲತಂಡ ರಘು ಮಾಚಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮುಖಂಡರಾದ ಸೂರಜ್ ಹೊಸೂರು, ಕೇಚಮಾಡ ಸಿದ್ದು ನಾಚಪ್ಪ, ಬಟ್ಟಕಾಳಂಡ ರಾಜ, ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.