National News

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ; ಫೆಬ್ರವರಿ 2026ರಲ್ಲಿ ಮದುವೆ ನಡೆಯುವ ಸಾಧ್ಯತೆ: ವರದಿ

admincoorgdaily

ಹೈದರಾಬಾದ್: ದಕ್ಷಿಣ ಭಾರತದ ಜನಪ್ರಿಯ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಟುಂಬ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ವಿವಾಹ 2026ರ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಜೋಡಿ ಇನ್ನೂ ತಮ್ಮ ನಿಶ್ಚಿತಾರ್ಥ ಅಥವಾ ಮದುವೆಯ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ವೈಯಕ್ತಿಕ ಬದುಕಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅವರು ಮೌನ ಪಾಲಿಸುತ್ತಿರುವುದಾಗಿ ವರದಿಗಳು ಹೇಳುತ್ತವೆ.

 ಇತ್ತೀಚೆಗೆ ದಸರಾ ಹಬ್ಬದ ಸಂದರ್ಭದಲ್ಲಿ ರಶ್ಮಿಕಾ ಸಾಂಪ್ರದಾಯಿಕ ಸೀರೆಯಲ್ಲಿ ತಿಲಕ ಧರಿಸಿ ಹಂಚಿಕೊಂಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಇದು ಅಭಿಮಾನಿಗಳಲ್ಲಿ ನಿಶ್ಚಿತಾರ್ಥದ ಊಹಾಪೋಹಗಳಿಗೆ ಕಾರಣವಾಗಿದ್ದವು. ಈ ಮೂಲಕ ಜೋಡಿಯ ವೈಯಕ್ತಿಕ ಬದುಕಿನ ಕುರಿತು ಕುತೂಹಲ ಮತ್ತಷ್ಟು ಗರಿಗೆದರುತ್ತಿದೆ.

ರಶ್ಮಿಕಾ ಅವರು ನಿರ್ದೇಶಕ ಆದಿತ್ಯ ಸರ್ಪೋತರ್ ಅವರ ‘ತಮ್ಮಾ’ ಎಂಬ ಹಾರರ್–ಹಾಸ್ಯ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜೊತೆಗೆ ನಟಿಸಿದ್ದಾರೆ. ನವಾನಝುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಕ್ಟೋಬರ್ 21, 2025ರಂದು ಬಿಡುಗಡೆಯಾಗಲಿದೆ.

 ವಿಜಯ್ ದೇವರಕೊಂಡ ಇತ್ತೀಚೆಗೆ ಗೌತಮ್ ತಿನ್ನನುರಿ ನಿರ್ದೇಶನದ ‘ಕಿಂಗ್ಡಮ್’ (2025) ಎಂಬ ತೆಲುಗು ಸ್ಪೈ ಆಕ್ಷನ್–ಥ್ರಿಲ್ಲರ್‌ನಲ್ಲಿ ನಟಿಸಿದ್ದರು.