ವಿರಾಜಪೇಟೆ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ 8 ಹೊಸ ಮಾರ್ಗ ಹಾಗೂ ಬಸ್ ಗಳ ಉದ್ಘಾಟನೆ
ವಿರಾಜಪೇಟೆ:ನಗರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ, 8 ಹೊಸ ಮಾರ್ಗಗಳನ್ನು ಹಾಗೂ 8 ಹೊಸ ಬಸ್ ಗಳ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ನೆರವೇರಿಸಿದರು.
ಬಸ್ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು, ಆಧುನಿಕತೆ ಹಾಗೂ ನಾಗರೀಕರಣ ವೃದ್ಧಿಯಾದಂತೆಲ್ಲ ಜನಸಂದಣಿ ಜಾಸ್ತಿಯಾಗುವುದನ್ನು ಮನಗಂಡು ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಮಾರ್ಗಗಳನ್ನು ಹಾಗೂ ಸುಸೂತ್ರವಾಗಿ ಪ್ರಯಾಣಿಸಲು ಹೊಸ ಬಸ್ ಗಳನ್ನು ಈ ಭಾಗಕ್ಕೆ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಸ್ ನ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದ್ದು ಇದರಿಂದ ನಾಡಿನ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರು ಜಾನ್ಸನ್, ವಿರಾಜಪೇಟೆ ಪುರಸಭೆಯ ಮುಖ್ಯಅಧಿಕಾರಿಗಳಾದ ನಾಚಪ್ಪ, ವಿರಾಜಪೇಟೆ ಪುರಸಭೆಯ ಉಪಾಧ್ಯಕ್ಷರಾದ ಫಸಿಯಾ ತಬ್ಸುಂ, ಹಾಗೂ ಸದಸ್ಯರು, ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳು, ಸರಕಾರಿ ನಾಮನಿರ್ದೇಶಕ ಅಧ್ಯಕ್ಷರು ಹಾಗೂ ಸದಸ್ಯರುಗಳು, ಆಹ್ವಾನಿತ ಗಣ್ಯರು, ಕೆಎಸ್ ಆರ್ ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.