ವಾಲ್ನೂರು: ಜನ ಸುರಕ್ಷಾ ಆಂದೋಲನ ಕಾರ್ಯಕ್ರಮ
admincoorgdaily
ಮಡಿಕೇರಿ:ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಯೂನಿಯನ್ ಬ್ಯಾಂಕ್ ಬ್ಯಾಂಕ್ ವಾಲ್ನೂರು ಸಹಯೋಗದೊಂದಿಗೆ ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮದಲ್ಲಿ, ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ,ಕೇಂದ್ರ ಸರಕಾರದ ಆದೇಶದಂತೆ ಆಯಾ ಗ್ರಾಮದ ಬ್ಯಾಂಕ್ ಶಾಖೆ ಮುಖಾಂತರ ಪ್ರತೀ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ,ಕೊಡಗು ಲೀಡ್ ಬ್ಯಾಂಕ್ ನ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಅವರು ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಅಪಘಾತ ವಿಮೆಯಾಗಿದ್ದು ವಾರ್ಷಿಕ 20ರೂ ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2,00,000ರೂ ಗಳ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು. ಹಾಗೂ ವಾರ್ಷಿಕವಾಗಿ 436/-ರೂಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಮರಣಹೊಂದಿದರೆ ನಾಮಿನಿಗೂ ಕೂಡ 2,00,000/-ರೂ ಗಳ ವಿಮಾ ಮೊತ್ತ ಸಿಗುವುದಾಗಿ ತಿಳಿಸಿದರು.ಈ ಎರಡನ್ನೂ ಮಾಡಿಸಿಕೊಂಡಲ್ಲಿ 400000/-ರೂ ಗಳ ವರೆಗಿನ ವಿಮಾಮೊತ್ತ ಸಿಗುವುದಾಗಿ ಮಾಹಿತಿ ನೀಡಿದರು.ಅಲ್ಲದೆ 60ವಯಸ್ಸು ಆದನಂತರದಲ್ಲಿ ಪಿಂಚಣಿ ರೂಪದಲ್ಲಿ 1000ರೂ ಗಳಿಂದ 5000ರೂ ಗಳ ವರೆಗಿನ ಪಿಂಚಣಿ ಹಣಸಿಗಬೇಕಾದರೆ ಈವಾಗಲೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಯಾದ ಅಲೋಕ್ ಸೀನ್ಹ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮೇದಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳ, ಉಪಾಧ್ಯಕ್ಷರಾದ ಮನು ಮಹೇಶ್ ,ಯೂನಿಯನ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಪಬಿತ ಇದ್ದರು.