Kodagu

ಜಲಾಶಯ ನೀರಿನ ಮಟ್ಟ ನೋಡಿಕೊಂಡು ಕೃಷಿ ಬೆಳೆಗೆ ನೀರು ಹರಿಸಲಾಗುವುದು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

admincoorgdaily

ಜಲಾಶಯ ನೀರಿನ ಮಟ್ಟ ನೋಡಿಕೊಂಡು ಕೃಷಿ ಬೆಳೆಗೆ ನೀರು ಹರಿಸಲಾಗುವುದು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಮಡಿಕೇರಿ:-ರಾಜ್ಯದಲ್ಲಿನ ಜಲಾಶಯಗಳು ಇನ್ನೂ ಸಹ ಭರ್ತಿ ಆಗಬೇಕಿದ್ದು, ಇನ್ನೂ ಹೆಚ್ಚಿನ‌ ಮಳೆ-ಬೆಳೆಯಾಗಿ ಎಲ್ಲರೂ ಶಾಂತಿ, ನೆಮ್ಮದಿ ತರುವಂತಾಗಲು ಶ್ರೀಭಗಂಡಶ್ವರ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು. 

      ಪುಣ್ಯಕ್ಷೇತ್ರ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮುಖ್ಯಮಂತ್ರಿ ಅವರು ಮಾತನಾಡಿದರು. 

        ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದೆ.  ತಮಿಳುನಾಡಿಗೆ ನೀರು ಹರಿಸುವಲ್ಲಿ ಕಾನೂನಿನ‌ ನಿಯಮ ಪಾಲಿಸುವುದು ಒಂದು ಕಡೆಯಾದರೆ, ಕೃಷಿ ಬೆಳೆಗಾಗಿ ನೀರು ಹರಿಸುವುದು ಮತ್ತೊಂದು ಕಡೆಯಾಗಿದೆ. ಇವೆರಡರ ದೊಡ್ಡ ಸವಾಲನ್ನು ಎದುರಿಸಲು ಹೆಚ್ಚಿನ ಮಳೆ ಅಗತ್ಯ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು. 

        ಜಲಾಶಯ ನೀರಿನ ಮಟ್ಟ ನೋಡಿಕೊಂಡು ಕೃಷಿ ಬೆಳೆಗೆ ನೀರು ಹರಿಸಲಾಗುವುದು, ಜತೆಗೆ ಕೆರೆ-ಕಟ್ಟೆಗೆ ನೀರು ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಅವರು ಆಶಾಭಾವನೆ ವ್ಯಕ್ತಪಡಿಸಿದರು. 

        ರಾಜ್ಯದ ಜನತೆ, ಗುರುಹಿರಿಯರ ಅನುಗ್ರಹದಿಂದ ಹೋರಾಟದ ಫಲವಾಗಿ ನಾಡಿನಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಮೇಕೆದಾಟು ಹೋರಾಟ ಸಂದರ್ಭದಲ್ಲಿ ನಮ್ಮ ನೀರು, ನಮ್ಮ ಹಕ್ಕು ಹೆಸರಿನಲ್ಲಿ ಪಾದಯಾತ್ರೆ ಕೈಗೊಳ್ಳಲಾಯಿತು. ಆ ಸಂದರ್ಭದಲ್ಲಿ ತಾಯಿ ಕಾವೇರಿ ಮಾತೆ ಹಾಗೂ ಶ್ರೀ ಭಗಂಡೇಶ್ವರ ದೇವರಲ್ಲಿ ಯಶಸ್ಸು ದೊರೆಯಲೆಂದು ಪ್ರಾರ್ಥಿಸಲಾಗಿತ್ತು, ಅದರಂತೆ ಪ್ರಾರ್ಥನೆಗೆ ಫಲ ಸಿಕ್ಕಿದೆ, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೂ ಅವಕಾಶವಾಗಿದೆ ಎಂದು ಮುಖ್ಯಮಂತ್ರಿ ಅವರು ಸ್ಮರಿಸಿದರು.

         ನಾಡಿನಲ್ಲಿ ವರುಣನ ಕೃಪೆಯಿಂದ ಜಲಾಶಯಗಳು ತುಂಬುವಂತಾದರೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. 

          ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮ ಪ್ರದೇಶ ವ್ಯಾಪ್ತಿಯಲ್ಲಿ ಮೂವರು ಗುಂಡೇಟಿಗೆ ಬಲಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಈ ಸಂಬಂಧ ಮ್ಯಾಜಿಸ್ಟ್ರೇಟ್ ಹಂತದಲ್ಲಿ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು, ಪರಿಹಾರ ನೀಡುವ ಸಂಬಂಧ ಪರಿಶೀಲಿಸಲಾಗುವುದು ಎಂದರು.