ಸುಂಟಿಕೊಪ್ಪದಲ್ಲಿ ಸುಸಜ್ಜಿತ ಬಸ್ ನಿಲ್ದಾಣ-ಮಾರುಕಟ್ಟೆ: ಜು.21ರೊಳಗೆ ಜನಾಭಿಪ್ರಾಯ ಸಭೆಗೆ ಶಾಸಕ ಮಂತರ್ ಗೌಡ ಸೂಚನೆ

Jul 13, 2026 - 12:07
 0  550
ಸುಂಟಿಕೊಪ್ಪದಲ್ಲಿ ಸುಸಜ್ಜಿತ ಬಸ್ ನಿಲ್ದಾಣ-ಮಾರುಕಟ್ಟೆ: ಜು.21ರೊಳಗೆ ಜನಾಭಿಪ್ರಾಯ ಸಭೆಗೆ ಶಾಸಕ ಮಂತರ್ ಗೌಡ ಸೂಚನೆ

ಸುಂಟಿಕೊಪ್ಪ: ಸಾರ್ವಜನಿಕರ ಬಹು ಬೇಡಿಕೆಯಾಗಿರುವ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಕುರಿತು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರು ಸುಂಟಿಕೊಪ್ಪದ ವಾರದ ಸಂತೆ ದಿನವಾದ ಭಾನುವಾರ ದಂದು ಮಾರುಕಟ್ಟೆ ವ್ಯಾಪಾರಸ್ಥರು, ಗ್ರಾಹಕರು ಹಾಗೂ ನಾಗರೀಕರೊಂದಿಗೆ ಚರ್ಚೆ ನಡೆಸಿದರು. ಸುಂಟಿಕೊಪ್ಪದ ಲೋಟಾಸ್ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದು,ಇದೀಗ ನೆನಗುದಿಗೆ ಬಿದ್ದಿರುವ ಸಂತೆ ಮಾರುಕಟ್ಟೆಯನ್ನು ವಿಕ್ಷೀಸಿದ ಬಳಿಕ ಪ್ರಸ್ತುತ ನಡೆಯುತ್ತಿರುವ ಸಂತೆ ಮಾರುಕಟ್ಟೆಗೆ ಭೇಟಿ ನೀಡಿದರು.

ಅಲ್ಲಿ ವ್ಯಾಪಾರಸ್ಥರು, ಗ್ರಾಹಕರು ಮತ್ತು ನಾಗರೀಕರರೊಂದಿಗೆ ಚರ್ಚೆ ನಡೆಸಿದ ಅವರು ಒಂದು ವಾರದೊಳಗೆ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವತಿಯಿಂದ ಜನಾಭಿಪ್ರಾಯ ಸಭೆ ನಡೆಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರಿಗೆ ನಿರ್ದೇಶನ ನೀಡಿದರು. ಜು.21 ರೊಳಗೆ ಸಭೆಯನ್ನು ನಡೆಸುವಂತೆ ಗಡುವು ನೀಡಿದರು.

 ಆ ಸಭೆಯ ಅಭಿಪ್ರಾಯಗಳನ್ನು ಹೊಂದಿಸಿಕೊಂಡು ವಿಶೇಷ ಗ್ರಾಮ ಸಭೆಯನ್ನು ಕರೆಯುವಂತೆ ಅವರು ಸೂಚಿಸಿದರು. 2 ಸಭೆಗಳಲ್ಲಿ ತಾವು ಪಾಲ್ಗೊಳ್ಳುವುದಾಗಿ ಶಾಸಕರು ಸ್ಪಷ್ಟಪಡಿಸಿದರು. ಈಗಾಗಲೇ ಸಾಕಷ್ಟು ಅನುದಾನಗಳನ್ನು ದ ನೂತನ ಮಾರುಕಟ್ಟೆಗೆ ವೆಚ್ಚ ಮಾಡಲಾಗಿದೆ. ಆದರೆ ಈ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳಿಗೆ ಇನ್ನಷ್ಟೇ ಆಗಬೇಕಾಗಿದ್ದು, ಇಲ್ಲಿಗೆ ಸ್ಥಳಾಂತರಗೊಳ್ಳಲು ವ್ಯಾಪಾರಸ್ಥರು ಗ್ರಾಹಕರು ಮತ್ತು ನಾಗರೀಕರಲ್ಲಿ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಮುಂದಿನ 2 ಸಭೆಗಳಲ್ಲಿ ತೆಗೆದುಕೊಳ್ಳುವ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದೆಂದು ಶಾಸಕರು ಸ್ಪಷ್ಟ ಪಡಿಸಿದರು‌.

ಮೀನು ಮತ್ತು ಮಾಂಸ ಮಾರುಕಟ್ಟೆ ಹರಾಜುಗೊಳ್ಳದೆ ಗ್ರಾಮ ಪಂಚಾಯಿತಿಯ ಆದಾಯಕ್ಕೆ ನಷ್ಟ ಉಂಟಾಗಿರುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಕಾನೂನು ರೀತಿಯ ಕ್ರಮ ಕೈಗೊಂಡು ಮುಂದಿನ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಪಿಡಿಒ ಗೆ ಸೂಚಿಸಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 6 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಇವರೆಲ್ಲಾರಿಗೂ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 275 ಸುಂಟಿಕೊಪ್ಪದ ಮಧ್ಯಹಾದು ಹೋಗಿದ್ದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ವತಿಯಿಂದ ನೂತನ ಮಾರುಕಟ್ಟೆಯ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದ್ದು, ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್‌ನಿಲ್ಧಾಣವಾಗಿ ಪರಿವರ್ತಿಸಬಹುದು. ಒಂದು ವೇಳೆ ಕೆಎಸ್‌ಆರ್‌ಟಿಸಿಗೆ ಈ ಜಾಗವನ್ನು ನೀಡಿದರೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ. ಒಂದು ವೇಳೆ ಪಂಚಾಯಿತಿ ವತಿಯಿಂದ ಬಸ್ ನಿಲ್ಧಾಣ ರೂಪುಗೊಂಡರೆ ಖಾಸಗಿ ಮತ್ತು ಸರ್ಕಾರಿ ಬಸ್ ನಿಲುಗಡೆಗೆ ಅವಕಾಶವಿರುತ್ತದೆ‌. ರಾಜ್ಯ ಸಾರಿಗೆ ಸಂಸ್ಥೆಯವರಿಗೆ ಬಿಟ್ಟು ಕೊಟ್ಟಲ್ಲಿ ಪಂಚಾಯಿತಿ ಆದಾಯಕ್ಕೆ ದಕ್ಕೆ ಹಾಗೂ ಖಾಸಗಿ ಬಸ್ ಮತ್ತು ಪ್ರವೇಶ ನಿಷೇದಗೊಳ್ಳಲಿದೆ ಎಂದು ತಿಳಿಸಿದರು.

 ಈ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡು ಮುಕ್ತವಾದ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸುಂಟಿಕೊಪ್ಪದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್, ಹೋಬಳಿ ಅಧ್ಯಕ್ಷ ರಜಾಕ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ಧುಲ್ ಹಕೀಂ,ಗ್ರಾಮ .ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಿವಮ್ಮ ಮಹೇಶ್, ಕೆ.ಇ.ಕರೀಂ, ಪಿ.ಎಫ್.ಸಬಾಸ್ಟೀನ್, ಎಂ.ಎ.ಉಸ್ಮಾನ್, ಮಾಜಿ ಸದಸ್ಯರುಗಳಾದ ಜಿನಾಸುದ್ಧಿನ್, ಕೆ.ಎಂ.ಆಲಿಕುಟ್ಟಿ, ಪಕ್ಷದ ಮುಖಂಡರುಗಳಾದ ಅಬ್ಧುಲ್ ಅಜೀಜ್, ಯಂಕನ ಶ್ರೀರಾಮ್, ಹಿರಿಯ ವರ್ತಕ ಎಂ.ಎ.ವಸಂತ,ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಗ್ರೇಸಿ ಡೇವಿಡ್, ಪಿಎಸ್ ಐ ಮೋಹನ್‌ರಾಜ್, ಹಾಗೂ ಗ್ರಾಮಸ್ಥರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0