MGNREGA ಕಾರ್ಮಿಕನ ಮಗನೇ ಕಾಮಗಾರಿ ವೀಕ್ಷಣೆಗೆ ಅಧಿಕಾರಿಯಾಗಿ ಬಂದಾಗ!

Sep 28, 2025 - 19:44
 0  594
MGNREGA ಕಾರ್ಮಿಕನ ಮಗನೇ ಕಾಮಗಾರಿ ವೀಕ್ಷಣೆಗೆ ಅಧಿಕಾರಿಯಾಗಿ ಬಂದಾಗ!

ಗುವಾಹಟಿ: ಅಸ್ಸಾಂ ಮೂಲದ ಯುವ ನಾಗರಿಕ ಸೇವಕ ರುಬು ಬೋರಾ ತಮ್ಮ ಜೀವನದ ಅಪರೂಪದ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ತೆಗೆಯಲಾದ ತಮ್ಮ ಛಾಯಾಚಿತ್ರವನ್ನು ಪ್ರಕಟಿಸಿದ ಅವರು, ಅದನ್ನು “ಪೂರ್ಣ ವೃತ್ತ ಕ್ಷಣ” ಎಂದು ವಿವರಿಸಿದ್ದಾರೆ.

ಕಳೆದ ವರ್ಷ ಅಸ್ಸಾಂ ಪಬ್ಲಿಕ್ ಸರ್ವೀಸ್ ಕಮಿಷನ್ (APSC) ಪರೀಕ್ಷೆಯಲ್ಲಿ 14ನೇ ಸ್ಥಾನ ಗಳಿಸಿದ ಬೋರಾ, “ಒಮ್ಮೆ ನನ್ನ ತಂದೆ ಇದೇ ಯೋಜನೆಯಡಿ ಕೂಲಿ ಕಾರ್ಮಿಕರಾಗಿದ್ದರು. ಇಂದು ನಾನು ಅಧಿಕಾರಿಯಾಗಿ ಈ ಕಾಮಗಾರಿಗಳನ್ನು ಪರಿಶೀಲಿಸುವ ಅವಕಾಶ ಪಡೆದಿರುವುದು ನನಗೆ ವಿನಮ್ರತೆಯನ್ನೂ ಕೃತಜ್ಞತೆಯನ್ನೂ ನೀಡಿದೆ” ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.

2005ರಲ್ಲಿ ಪ್ರಾರಂಭವಾದ MGNREGA ಯೋಜನೆ, ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕವಾಗಿ ಕನಿಷ್ಠ 100 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸುವ ಉದ್ದೇಶ ಹೊಂದಿದೆ. ಈ ಯೋಜನೆ ಗ್ರಾಮೀಣ ಜೀವನೋಪಾಯಕ್ಕೆ ಮಹತ್ವದ ಆಧಾರವಾಗಿದ್ದು, ಲಕ್ಷಾಂತರ ಕಾರ್ಮಿಕರ ಬದುಕಿಗೆ ನೆರವಾಗುತ್ತಿದೆ.

ಬೋರಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಪ್ರಶಂಸೆ ಗಳಿಸಿದೆ. ಅನೇಕರು ಅವರ ಸಾಧನೆಯನ್ನು ಶ್ಲಾಘಿಸಿ, “ಪೋಷಕರ ಪರಿಶ್ರಮವನ್ನು ವ್ಯರ್ಥಗೊಳಿಸದ ಉದಾಹರಣೆ” ಎಂದು ಕಮೆಂಟ್ ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸಹ ಬೋರಾ ಅವರನ್ನು ಅಭಿನಂದಿಸಿದ್ದಾರು. “ಬಿಪಿಎಲ್ ಕುಟುಂಬದಿಂದ ಬಂದಿದ್ದರೂ, ಎಲ್ಲಾ ಅಡೆತಡೆಗಳನ್ನು ದಾಟಿ APSCಯಲ್ಲಿ 14ನೇ ಸ್ಥಾನ ಗಳಿಸಿರುವುದು ಕಠಿಣ ಪರಿಶ್ರಮ ಸದಾ ಫಲ ನೀಡುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರಳ ಕಾರ್ಮಿಕನ ಮಗ ಇಂದಿಗೆ ಅದೇ ಯೋಜನೆಯನ್ನು ಪರಿಶೀಲಿಸುವ ಅಧಿಕಾರಿಯಾಗಿ ಬೆಳಗುತ್ತಿರುವುದು ಸಮಾಜಕ್ಕೆ ಪ್ರೇರಣಾದಾಯಕ ಸಂದೇಶವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0