ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ

Mar 28, 2026 - 20:01
 0  1.4k
ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ
Photo credit: TV09 (ಪತ್ನಿ ಪೂಜಾ ಹಾಗೂ ಕೊಲೆಯಾದ ದುರ್ದೈವಿ ಸಾಗರ್)

ಯಾದಗಿರಿ, ಮಾ.28: ಸುಖವಾಗಿದ್ದ ಸಂಸಾರಕ್ಕೆ ‘ಸೈತಾನ’ನಂತೆ ಎಂಟ್ರಿ ಕೊಟ್ಟ ಪರಪುರುಷನ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯಲ್ಲಿ (Yadgiri murder case) ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳ ಕರಾಳ ಕೃತ್ಯ ಈಗ ಬಯಲಾಗಿದೆ.

 ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಸಾಗರ್ ಪತ್ನಿ ಪೂಜಾ ಹಾಗೂ ಅದೇ ಊರಿನ ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಮೂರು ಬಾರಿ ಪೂಜಾ ತನ್ನ ಪ್ರಿಯತಮನ ಜೊತೆ ಓಡಿ ಹೋಗಿದ್ದಳು.

ಪಂಚಾಯತಿ ಮಾಡಿ ಬುದ್ಧಿ ಹೇಳಿದರೂ ಇವರ ಕಾಮದಾಟ ನಿಂತಿರಲಿಲ್ಲ. ಕೊನೆಗೆ ದಾರಿಗೆ ಅಡ್ಡವಾಗಿದ್ದ ಸಾಗರ್‌ನನ್ನು ಮುಗಿಸಲು ಪತ್ನಿ ಮತ್ತು ಪ್ರಿಯತಮ ಸ್ಕೆಚ್ ಹಾಕಿದ್ದರು. ಪ್ರಿಯತಮ ರೆಡ್ಡಿ ರಾಠೋಡ್, ಸಾಗರ್‌ನನ್ನು ಕೊಲ್ಲಲು ಮಹೇಶ್ ಎಂಬಾತನಿಗೆ 1 ಲಕ್ಷ ರೂ. ಸುಪಾರಿ ನೀಡಿದ್ದನು. ಮಾರ್ಚ್ 22ರ ರಾತ್ರಿ ಬಾಡಿಗೆ ಇದೆ ಎಂದು ಸುಳ್ಳು ಹೇಳಿ ಸಾಗರ್‌ನನ್ನು ಆಟೋ ಸಮೇತ ಕರೆಸಿಕೊಳ್ಳಲಾಯಿತು. ಲಿಂಗೇರಿ ಬಳಿ ನಿರ್ಜನ ಪ್ರದೇಶದಲ್ಲಿ ಸಾಗರ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಯಿತು.

ಕೊಲೆಯಾದ ನಂತರ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೊಸಹಳ್ಳಿ ಬಳಿ ತಂದು, ಅಲ್ಲಿ ಆಟೋಗೆ ಕಾರಿನಿಂದ ಡಿಕ್ಕಿ ಹೊಡೆಸಲಾಯಿತು. ಸಾಗರ್ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಈ ಸೀನ್ ಕ್ರಿಯೇಟ್ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ಅಪಘಾತವಲ್ಲ ಎಂಬ ಸಂಶಯ ಬಂದಿತ್ತು. ಸಾಗರ್ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಮಹೇಶ್ ಎಂಬಾತನ ಕರೆ ಪತ್ತೆಯಾಯಿತು.

ಮಹೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಯಿತು. ಪ್ರಿಯತಮ ರೆಡ್ಡಿ ರಾಠೋಡ್ ಮತ್ತು ಪತ್ನಿ ಪೂಜಾ ಸೇರಿ ಈ ಕೃತ್ಯ ಎಸಗಿರುವುದು ಸಾಬೀತಾಯಿತು. ಯಾದಗಿರಿ ಗ್ರಾಮಾಂತರ ಪೊಲೀಸರು ಈಗ ಮಹೇಶ್, ರೆಡ್ಡಿ ರಾಠೋಡ್ ಮತ್ತು ಪತ್ನಿ ಪೂಜಾ ಎಂಬ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

What's Your Reaction?

Like Like 0
Dislike Dislike 1
Love Love 2
Funny Funny 0
Angry Angry 2
Sad Sad 1
Wow Wow 0