ಅಮ್ಮತ್ತಿ ವ್ಯಾಪ್ತಿಯಲ್ಲಿ ಕಾಡಾನೆ ಸೆರೆ:ಎರಡನೇ ಹಂತದ ಕಾರ್ಯಾಚರಣೆಗೆ ಮೊದಲ ದಿನವೇ ಯಶಸ್ಸು
ಸಿದ್ದಾಪುರ;ಅಮ್ಮತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳ ಸೆರೆ ಕಾರ್ಯಾಚರಣೆಯ ಎರಡನೇ ಹಂತಕ್ಕೆ ಮೊದಲ ದಿನವೇ ಯಶಸ್ಸು ದೊರೆತಿದೆ. ಅಮ್ಮತ್ತಿ ಸಮೀಪದ ಯಡೂರು ಗ್ರಾಮದ ಉಮೇಶ್ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಸುಮಾರು 30 ವರ್ಷ ಪ್ರಾಯದ ಗಂಡಾನೆಯನ್ನು ಅರಣ್ಯ ಇಲಾಖೆ ಶುಕ್ರವಾರ ಯಶಸ್ವಿಯಾಗಿ ಸೆರೆಹಿಡಿದಿದೆ.
ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಆದರ್ಶ ಅವರ ನೇತೃತ್ವದ ಪರಿಣತ ತಂಡವು ಕಾರ್ಯಾಚರಣೆ ನಡೆಸಿ, ಗಂಡಾನೆಗೆ ಅರಿವಳಿಕೆ ಮದ್ದು ನೀಡಿ ನಿಯಂತ್ರಣಕ್ಕೆ ತೆಗೆದುಕೊಂಡಿತು ಬಳಿಕ ದುಬಾರೆ ಆನೆ ಶಿಬಿರದಿಂದ ಕರೆತರಲಾಗಿದ್ದ ಐದು ಕುಮ್ಕಿ ಆನೆಗಳ ನೆರವಿನಿಂದ ಗಂಡಾನೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಯಿತು. ವಿರಾಜಪೇಟೆ ಡಿಎಫ್‌ಒ ವಿನೀತಾ ಜಿ. ಚೌಹಾಣ್, ಎಸಿಎಫ್ ತಹಸೀನ್ ಬಾನು, ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ವಲಯ ಅರಣ್ಯಾಧಿಕಾರಿ ಶಿವರಾಮ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪಶುವೈದ್ಯರಾದ ಮುಜೀಬ್ ಮತ್ತು ಶೂಟರ್ ಆದರ್ಶ್, ಹಾಗೂ ದುಬಾರೆ ಶಿಬಿರದಿಂದ ಆಗಮಿಸಿದ್ದ ಮಾವುತರು ಪಾಲ್ಗೊಂಡಿದ್ದರು ಹಾಗೂ ಆನೆ ಕಾರ್ಯಪಡೆ, ಆರ್‌ಆರ್‌ಟಿ ಸಿಬ್ಬಂದಿ,ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಮ್ಮತ್ತಿ ಶಾಖೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಮೂರು ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಸರ್ಕಾರ ಅರಣ್ಯ ಇಲಾಖೆಗೆ ಆದೇಶಿಸಿತ್ತು ಈ ಪೈಕಿ ಈಗಾಗಲೇ ಚಂಬೆಬೆಳ್ಳೂರಿನಲ್ಲಿ ಸುಮಾರು 32 ವರ್ಷ ಪ್ರಾಯದ ಒಂದು ಗಂಡಾನೆಯನ್ನು ಸೆರೆಹಿಡಿಯಲಾಗಿತ್ತು.
ಇದೀಗ ಎರಡನೇ ಹಂತದ ಕಾರ್ಯಾಚರಣೆಯ ಮೊದಲ ದಿನವೇ ಮತ್ತೊಂದು ಗಂಡಾನೆ ಸೆರೆ ಸಿಕ್ಕಿದೆ ಉಳಿದ ಮೂರನೇ ಗಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿಯಲಿದೆ ಸೆರೆಹಿಡಿಯಲಾದ ಗಂಡಾನೆಯನ್ನು ಸುರಕ್ಷಿತವಾಗಿ ದುಬಾರೆ ಆನೆ ಶಿಬಿರಕ್ಕೆ ರವಾನಿಸಲು ಅರಣ್ಯ ಇಲಾಖೆ ಅಗತ್ಯ ವ್ಯವಸ್ಥೆ ಕೈಗೊಂಡಿದೆ.
ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಜಿ. ಚೌಹಾಣ್ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರದೇಶದಲ್ಲಿ ಮೂರು ಉಪಟಳಕಾರಿ ಗಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಈಗಾಗಲೇ ಎರಡು ಗಂಡಾನೆಗಳನ್ನು ಸೆರೆಹಿಡಿಯಲಾಗಿದ್ದು ಉಳಿದ ಮೂರನೇ ಗಂಡಾನೆಯನ್ನು ಸೆರೆಹಿಡಿಯಲು ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸೆರೆಹಿಡಿಯಲಾದ ಆನೆಗಳನ್ನು ದುಬಾರೆ ಆನೆ ಶಿಬಿರದಲ್ಲಿ ಇರಿಸಲಾಗುವುದು ಅಲ್ಲಿ ಮಾವುತರ ಮೂಲಕ ತರಬೇತಿ ಹಾಗೂ ಪಳಗಿಸುವ ಪ್ರಕ್ರಿಯೆ ನಡೆಸಲಾಗುತ್ತದೆ ಬೆಳೆ ಹಾನಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಉಪಟಳಕಾರಿ ಕಾಡಾನೆಗಳನ್ನು ಗುರುತಿಸಿ ಅವುಗಳ ಚಲನವಲನವನ್ನು ಟ್ರ್ಯಾಕಿಂಗ್ ಮಾಡುವ ಮೂಲಕ ಮುಂದಿನ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
