ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ!

ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ!
Photo credit: TV09

ಸಂಗರೆಡ್ಡಿ (ತೆಲಂಗಾಣ), ನ. 7: ಮಹಿಳೆಯೊಬ್ಬರು ಇರುವೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

25 ವರ್ಷದ ವಿವಾಹಿತೆ ನವೆಂಬರ್ 4 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಬಾಲ್ಯದಿಂದಲೂ ಇರುವೆಗಳ ಭಯವಿದ್ದು, ಈ ಹಿನ್ನೆಲೆಯಲ್ಲಿ ಹಿಂದೆಯೂ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯ ದಿನ ಪತಿ ಕೆಲಸಕ್ಕೆ ತೆರಳಿದ್ದ ವೇಳೆ, ಮಹಿಳೆ ತನ್ನ ಮಗಳನ್ನು ಸಂಬಂಧಿಕರ ಮನೆಗೆ ಬಿಟ್ಟು, “ಮನೆ ಸ್ವಚ್ಛಗೊಳಿಸಿ ಬಳಿಕ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿದ್ದರು ಎನ್ನಲಾಗಿದೆ. ಮನೆಯನ್ನು ಶುಚಿಗೊಳಿಸುವ ವೇಳೆ ಇರುವೆಗಳನ್ನು ಕಂಡು ಆತಂಕಗೊಂಡು, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಸಂಜೆ ಮನೆಗೆ ಬಂದ ಪತಿ ಬಾಗಿಲು ಒಳಗಡೆಯಿಂದ ಲಾಕ್ ಆಗಿರುವುದನ್ನು ಕಂಡು ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿ ಸಿಕ್ಕಿದ ಆತ್ಮಹತ್ಯಾ ಪತ್ರದಲ್ಲಿ ಮಹಿಳೆ, “ಕ್ಷಮಿಸಿ, ನಾನು ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಜಾಗರೂಕರಾಗಿರಿ” ಎಂದು ಬರೆದಿರುವುದು ಪತ್ತೆಯಾಗಿದೆ.

2022ರಲ್ಲಿ ವಿವಾಹವಾಗಿದ್ದ ಅವರಿಗೆ, ಮೂರು ಮಕ್ಕಳಿದ್ದಾರೆ. ಅಮೀನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.