ಮಾಲ್ದಾರೆಯಲ್ಲಿ ಚಿರತೆ ದಾಳಿ ಮಹಿಳೆಗೆ ಗಾಯ
ಸಿದ್ದಾಪುರ:ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ತೋಟದಲ್ಲಿ ಕೆಲಸಗಾರರನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಗ್ರಾಮದ ಮೂಡಗದ್ದೆ ನಿವಾಸಿ ಜಯ ಅವರ ಪತ್ನಿ ಲೀಲಾವತಿ (59) ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ವೀಕ್ಷಿಸುತ್ತಿದ್ದ ವೇಳೆ ಹಠಾತ್ತನೆ ಬಂದ ಚಿರತೆ ದಾಳಿ ನಡೆಸಿದ್ದು, ಅವರ ಬಲಗಡೆ ದವಡೆ, ಕಿವಿಯ ಕೆಳಭಾಗ ಹಾಗೂ ಬೆನ್ನಿನ ಭಾಗಕ್ಕೆ ಪಂಜದ ಹೊಡೆತದಿಂದ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಅವರನ್ನು ಗೋಣಿಕೊಪ್ಪದ ಲೋಪಮುದ್ರ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ದವಡೆಗೆ ಹೊಲಿಗೆ ಹಾಗೂ ಇತರ ಗಾಯಗಳಿಗೆ ಸ್ಟೇಪಲ್ ಹಾಕಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಮಧ್ಯಾಹ್ನ 12.30ರಿಂದ 12.45ರ ಅವಧಿಯಲ್ಲಿ ಅದೇ ತೋಟದ ಸಮೀಪ ಚಿರತೆ ಪತ್ತೆಯಾಗಿದೆ. ಚಿರತೆಗೆ ಹೊಟ್ಟೆ ಭಾಗದಲ್ಲಿ ಗಾಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಅದರ ಚಲನವಲನ ನಿಧಾನಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಆನೆಚೌಕೂರು ವಲಯ ಅರಣ್ಯಾಧಿಕಾರಿ ಗಂಗಾಧರ್, ತಿತ್ತಿಮತಿ ವಲಯ ಅರಣ್ಯಾಧಿಕಾರಿ ರಾಕೇಶ್, ಅರಣ್ಯಾಧಿಕಾರಿ ಶಶಿ, ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆಯನ್ನು ಸೆರೆಹಿಡಿಯಲು ಘಟನೆ ಸಮೀಪ ಸ್ಥಳದಲ್ಲಿ ಬೋನು ಇರಿಸಲಾಗಿದ್ದು ಅದರ ಚಲನವಲನದ ಮೇಲೆ ನಿಗಾ ವಹಿಸಲು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ.
ಚಿರತೆ ಗಾಯಗೊಂಡಿರುವ ಹಿನ್ನೆಲೆ ಶುಕ್ರವಾರದಿಂದ ಸಾಕಾನೆಗಳ ನೆರವಿನೊಂದಿಗೆ ವಿಶೇಷ ಶೋಧ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ ಆನೆಚೌಕೂರು ಹಾಗೂ ತಿತ್ತಿಮತಿ ವಲಯಗಳ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ ಅರಣ್ಯ ಇಲಾಖೆ ಸಾರ್ವಜನಿಕರು ಅನಗತ್ಯವಾಗಿ ತೋಟ ಪ್ರದೇಶಗಳಿಗೆ ತೆರಳದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ ನೀಡದಂತೆ ಮನವಿ ಮಾಡಿದೆ ಅಲ್ಲದೆ ಚಿರತೆ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
