ಸಹೋದರನ ಚಿಕಿತ್ಸೆಗಾಗಿ ಪತಿಯ ಮನೆಯಿಂದ 30 ಲಕ್ಷ ರೂ. ಕಳ್ಳತನ ಮಾಡಿದ ಮಹಿಳೆ!

ಸಹೋದರನ ಚಿಕಿತ್ಸೆಗಾಗಿ ಪತಿಯ ಮನೆಯಿಂದ 30 ಲಕ್ಷ ರೂ. ಕಳ್ಳತನ ಮಾಡಿದ ಮಹಿಳೆ!
Photo credit: INDIA TODAY

ಮೀರತ್ (ಉತ್ತರ ಪ್ರದೇಶ): ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ತಮ್ಮನ ಶಸ್ತ್ರಚಿಕಿತ್ಸೆಗೆ ಹಣದ ತೀವ್ರ ಅವಶ್ಯಕತೆ ಇದ್ದ ಕಾರಣ, ಮಹಿಳೆಯೊಬ್ಬಳು ತನ್ನ ಪತಿಯ ಮನೆಯಿಂದಲೇ ಸುಮಾರು 30 ಲಕ್ಷ ರೂ. ಮೌಲ್ಯದ ಆಭರಣ ಮತ್ತು ನಗದು ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದ ವೀರತ್ ನಲ್ಲಿ ನಡೆದಿದೆ.

ಅಕ್ಟೋಬರ್ 15ರಂದು ಜವಳಿ ವ್ಯಾಪಾರಿ ಪಿಯೂಷ್ ಮಿತ್ತಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಮನೆಯಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ರೂ. ನಗದು ಕಾಣೆಯಾಗಿದೆ ಎಂದು ತಿಳಿಸಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿ ಕುರಿತು ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದರು.

ಆದರೆ ತನಿಖೆಯಲ್ಲಿ ಹೊರಬಂದ ಸತ್ಯ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು. ಕಳ್ಳತನದ ಪಿತೂರಿಯ ಹಿಂದೆ ಮನೆಯಲ್ಲಿದ್ದವರೇ ಇದ್ದರೆಂಬುದೊಂದು ಆಘಾತಕಾರಿ ವಾಸ್ತವವಾಗಿ ಹೊರಹೊಮ್ಮಿತು. ಪಿಯೂಷ್ ಅವರ ಪತ್ನಿ ಪೂಜಾ ಮಿತ್ತಲ್ (32) ಈ ಅಪರಾಧದ ಪ್ರಮುಖ ಆರೋಪಿಯಾಗಿದ್ದು, ತನ್ನ ಸಹೋದರನ ಮೂತ್ರಪಿಂಡ ಚಿಕಿತ್ಸೆಗೆ ಹಣ ಒದಗಿಸಲು ಈ ಕೃತ್ಯವನ್ನು ರೂಪಿಸಿದ್ದಾಳೆಂದು ತಿಳಿದುಬಂದಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದು, ಸಹೋದರನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು.

ಕಳ್ಳತನ ನಡೆದ ದಿನ, ಪೂಜಾ ತಮ್ಮ ಪತಿಗೆ ಜೊತೆಗಿದ್ದು, ಮಧ್ಯಾಹ್ನ 3.15ರಿಂದ ಸಂಜೆ 6ರವರೆಗೆ ಶಾಪಿಂಗ್‌ಗೆ ತೆರಳಿದ್ದರು. ಮನೆ ಖಾಲಿಯಾಗಿರುವ ವೇಳೆಯಲ್ಲಿ ಕೀಲಿ ಕೈ ಇಡುವ ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪೂಜಾ ಮುಂಚಿತವಾಗಿ ತಮ್ಮ ಸಂಬಂಧಿಗಳಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಆಭರಣ ಮತ್ತು ನಗದು ಕಳವು ಮಾಡಲಾಗಿದೆ.

ಪೂಜಾ ಮಿತ್ತಲ್, ಅವರ ಅತ್ತೆ ಅನಿತಾ, ಸಂಬಂಧಿ ರವಿ ಬನ್ಸಾಲ್ ಮತ್ತು ದೀಪಕ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪಿಯೂಷ್ ಮತ್ತು ಪೂಜಾ ಮದುವೆಯಾಗಿ ಕೇವಲ ಆರು ತಿಂಗಳುಗಳಾಗಿದ್ದು, ಇದು ಪೂಜಾಗೆ ಎರಡನೇ ಮತ್ತು ಪಿಯೂಷ್‌ಗೆ ಮೂರನೇ ಮದುವೆಯಾಗಿದೆ ಎಂಬುದು ತಿಳಿದುಬಂದಿದೆ.

ಪೊಲೀಸರು ಈ ಪ್ರಕರಣದ ಕುರಿತು , “ಉದ್ದೇಶ ಮಾನವೀಯವಾಗಿದ್ದರೂ ಮಾಡಿರುವುದು ಕಾನೂನು ಬಾಹಿರ ಕೆಲಸ. ಮಾನವೀಯತೆ ಬೇರೆ, ಅಪರಾಧ ಬೇರೆ,” ಎಂದು ಹೇಳಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.