ಕುಶಾಲನಗರ: ಸುಡುವ ಬಿಸಿಲಲ್ಲಿ ಎಳೆಯ ಹಸುಳೆಗಳ ಹೊತ್ತು ಭಿಕ್ಷೆ ಬೇಡುವ ಮಹಿಳೆಯರು!

ಕುಶಾಲನಗರ: ಸುಡುವ ಬಿಸಿಲಲ್ಲಿ  ಎಳೆಯ ಹಸುಳೆಗಳ  ಹೊತ್ತು ಭಿಕ್ಷೆ ಬೇಡುವ ಮಹಿಳೆಯರು!

ಕಣಿವೆ : ಹೆಗಲ ಮೇಲೊಂದು ಎಳೆಯ ಕೂಸು....ಮೊದಲೇ ಝಳ ಝಳ ಸುಡುವ ಬಿಸಿಲ ನಡುವೆಯೂ ಆ ಕೂಸಿನ ಮೇಲೊಂದು ಹೊದಿಕೆ... ಆ ಕೂಸಿನ ಮುಖ ಕೂಡ ಕಾಣದಂತೆ ಅದಕೊಂದು ಟೋಪಿ. ಇದು ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ಕಂಡು ಬಂದ ಚಿತ್ರಣ.

ಭಿಕ್ಷಾಟನೆ ಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ ಕೂಡ ಎಳೆಯ ಹಸುಳೆಗಳನ್ನು ತಂದು ಮಹಿಳೆಯರಲ್ಲಿ ಅನುಕಂಪ ಗಿಟ್ಟಿಸಿ ಭಿಕ್ಷೆ ಬೇಡುತ್ತಿರುವುದು ಅಪರಾಧವಾಗಿದೆ. ಕನ್ನಡ ಭಾಷೆ ಅರಿಯದ ತೆಲುಗು ಮಾತಾನಾಡುವ ಮೂರ್ನಾಲ್ಕು ಮಹಿಳೆಯರು ಬೇರೆ ಬೇರೆ ಕಡೆ ತಿರುಗಿಕೊಂಡು ಸುತ್ತುತ್ತಾ ಭಿಕ್ಷೆ ಬೇಡುತ್ತಿರುವುದು ಅನುಮಾನಕ್ಕೆ ಆಸ್ಪದವಾಗಿದ್ದು ಕೂಡಲೇ ಪೋಲಿಸರು ಈ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೆಲವು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಮಹಿಳೆಯರು ತಮ್ಮ ಎದೆಯ ಮೇಲೆ ಮಲಗಿಸಿ ಕೊಂಡು ಸಾಗುವ ಎಳೆಯ ಮಕ್ಕಳು ಸಾಮಾನ್ಯವಾಗಿ ಮಲಗಿದ ಸ್ಥಿತಿಯಲ್ಲೇ ಇರುವುದು ಕೂಡ ಕಂಡು ಬರುತ್ತಿದ್ದು ಈ ಮಹಿಳೆಯರಿಗೂ ಮಕ್ಕಳಿಗೂ ಮುಖಭಾವದ ಕುರುಹುಗಳೇ ವ್ಯಕ್ತವಾಗುತ್ತಿಲ್ಲ. ಹಾಗಾಗಿ ಈ ಮಕ್ಕಳು ಯಾರು ? ಈ ಮಹಿಳೆಯರು ಎಲ್ಲಿಂದ ಬಂದಿದ್ದಾರೆ? ಇವರ ಹಿಂದಿನ ರೂವಾರಿಗಳಾರು ಎಂಬುದನ್ನು ಪೋಲೀಸರು ಪತ್ತೆ ಹಚ್ಚಬೇಕೆಂಬುದು ಕೂಡ ಆಗ್ರಹವಾಗಿದೆ.

ಏಕೆಂದರೆ ಎಳೆಯ ಹಸುಳೆಗಳಾದ ಈ ಮಕ್ಕಳಿಗೆ ಈ ತಾಯಂದಿರು ಎಲ್ಲಿಯೂ ಹಾಲು ಉಣಿಸುವುದಾಗಲೀ, ಏನಾದರೂ ತಿನ್ನಿಸುವುದು ಅಥವಾ ಮುದ್ದಾಡುವುದು ಕೂಡ ಕಂಡು ಬರದ ಹಿನ್ನೆಲೆಯಲ್ಲಿ ಪೋಲಿಸರು ಸೂಕ್ತ ವಿಚಾರಣೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.