Kodagu

ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸೆ.9 ರಂದು ಸಿಎನ್‌ಸಿ ಸತ್ಯಾಗ್ರಹ

admincoorgdaily

ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸೆ.9 ರಂದು ಸಿಎನ್‌ಸಿ ಸತ್ಯಾಗ್ರಹ

ಮಡಿಕೇರಿ ಆ.6 : ವಿಶ್ವ ಆದಿಮಸಂಜಾತರ ಹಕ್ಕುಗಳ ದಿನವಾದ ಸೆ.9 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ.

 ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಸತ್ಯಾಗ್ರಹ ನಡೆಸಿ ಕೊಡವ ಮಣ್ಣಿನ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಜನಾಂಗ ಕೊಡವರ ಪರವಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ವಿಶ್ವಸಂಸ್ಥೆಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಕೊಡವರು ಈ ಮಣ್ಣಿಗೆ ಬದ್ಧರಾಗಿರುವ ಅತ್ಯಂತ ಪ್ರಾಚೀನ ಆದಿಮಸಂಜಾತರು. ಕೊಡವ ಪರಂಪರೆಯು ಯೋಧತ್ವವನ್ನು ಮೈಗೂಡಿಸಿಕೊಂಡಿದೆ. ಸಿಎನ್‌ಸಿ ತನ್ನ ದೀರ್ಘಕಾಲದ, ನ್ಯಾಯಸಮ್ಮತ, ಪರಮೋಚ್ಚ ಸಾಂವಿಧಾನಿಕ ಬೇಡಿಕೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಒಳಗೊಂಡ ಬೇಡಿಕೆಗಳನ್ನು ಮಂಡಿಸಲಿದೆ. "ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಧಾರದ ಹಕ್ಕುಗಳಿಗಾಗಿ ಪ್ರತಿಪಾದಿಸಲಿದೆ. ಆದ್ದರಿಂದ ಸರ್ವ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹಕ್ಕೊತ್ತಾಯಗಳನ್ನು ಬೆಂಬಲಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.