ಕುಶಾಲನಗರ ಪಿ.ಎಂ.ಶ್ರೀ ಶಾಲೆಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ

Jul 28, 2026 - 15:50
 0  59
ಕುಶಾಲನಗರ ಪಿ.ಎಂ.ಶ್ರೀ ಶಾಲೆಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ

ಕುಶಾಲನಗರ, ಜುಲೈ 28: ನಮ್ಮ ಭವಿಷ್ಯದ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡುವ ನೈಸರ್ಗಿಕ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಿ ಸ್ವಚ್ಛ, ಸುಂದರ ಹಸಿರು ಭೂಮಿಯನ್ನು ನಿರ್ಮಾಣ ಮಾಡಲು ನಾವು ಸಂಕಲ್ಪ ತೊಡಬೇಕು ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ದ ವತಿಯಿಂದ ಕುಶಾಲನಗರ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್ , ಶಾಲೆಯ ಗೈಡ್ಸ್ ಘಟಕ ಹಾಗೂ ಕೊಡಗು ಜಿಲ್ಲಾ ಪರಿಸರ ಜಾಗೃತಿ ಅಭಿಯಾನದ ಸಂಯುಕ್ತಾಶ್ರಯದಲ್ಲಿ ನಮ್ಮ ನಡೆ ಹಸಿರೆಡೆಗೆ- ಪರಿಸರಕ್ಕಾಗಿ ನಾವು : ಮಕ್ಕಳ ಪರಿಸರ ಸಂಭ್ರಮ: 2026 ರ ಮಂಗಳವಾರ( ಜುಲೈ 28 ರಂದು) ಜಾಗೃತಿ ಅಭಿಯಾನದಡಿ "ಪುನಃಸ್ಥಾಪನೆ, ಸ್ಥಿತಿಸ್ಥಾಪಕತ್ವ ಮತ್ತು ಜವಾಬ್ದಾರಿ" ಎಂಬ ಪ್ರಮುಖ ಧ್ಯೇಯ (ಥೀಮ್)ದೊಂದಿಗೆ ವಿಶ್ವ ಪ್ರಕೃತಿ ಸಂರಕ್ಷಣಾ ದಿನ: 2026 ಕ್ಕೆ ಚಾಲನೆ ನೀಡಿ ಮಾತನಾಡಿದರು.

 ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಕೃತಿ ಸಂರಕ್ಷಣಾ ದಿನದ ಮಹತ್ವ ಹಾಗೂ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಪರಿಸರ ಮಾಹಿತಿ ನೀಡಿ ಮಾತನಾಡಿ ಅವರು, ನಾವು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಉಳಿಸುವ ಮೂಲಕ ನಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದರು.

ನಮ್ಮ ಪರಿಸರದಲ್ಲಿ ಮಣ್ಣು, ನೀರು, ಅರಣ್ಯ, ವನ್ಯಜೀವಿಗಳು ಹಾಗೂ ಜೀವ- ವೈವಿಧ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.

 ಶಾಲಾ ಮುಖ್ಯ ಶಿಕ್ಷಕ ಕೆ.ಎಸ್.ಸಣ್ಣಸ್ವಾಮಿ ಮಾತನಾಡಿ, ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಲು ಪಣ ತೊಡಬೇಕು ಎಂದರು. ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಿ ಉಂಟಾಗುವ ವಾಯು ಹಾಗೂ ಜಲ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಉತ್ತಮ ಹಾಗೂ ಸುಂದರ ಪರಿಸರ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.

ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಸ್. ಚಂದನ್ ಕುಮಾರ್ ಮಾತನಾಡಿ, ನಾವು ನಮ್ಮ ನಿತ್ಯ ಜೀವನದಲ್ಲಿ ಉತ್ತಮ ಹಾಗೂ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊ ಳ್ಳುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ನಾವು ಕಟಿಬದ್ಧರಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಕೆ.ಆರ್.ಶಿಲ್ಪ, ವಿದ್ಯಾಯಾರ್ಥಿಗಳು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಗೈಡ್ಸ್ ಕ್ಯಾಪ್ಟನ್ ಪಿ.ಪಿ.ಭವ್ಯ, ಶಿಕ್ಷಕಿಯರಾದ ಎಂ.ಎಂ.ಭಾರತಿ, ಕೆ.ಭಾಗ್ಯಮ್ಮ, ಎಸ್ ಡಿ ಎಂ ಸಿ ಸದಸ್ಯರಾದ ನಂಜಪ್ಪ, ಬಸವರಾಜು,ರೇಣುಕಾ ಮಂಜುನಾಥ್, ರಾಜು, ಮುಶೀರ್, ರೀನಾ ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಕ್ಕಳಿಂದ ಹುಟ್ಟುಹಬ್ಬ ಆಚರಣೆ: ಇದೇ ವೇಳೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಶಾಲಾ ವಿದ್ಯಾರ್ಥಿಗಳಾದ ಎ.ಇಶಾನ್ ಮತ್ತು ಆರ್.ಅನಿತಾ ಅವರು ಶಾಲಾವರಣದಲ್ಲಿ ಗಿಡನೆಟ್ಟು ಮಕ್ಕಳೊಂದಿಗೆ ಸಂಭ್ರಮಿಸಿದರು.

ಪರಿಸರ ಜಾಗೃತಿ: ಮಕ್ಕಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಪರಿಸರ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆ, ನೆಲ- ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸಿ , ಭೂಮಿಯನ್ನು ಉಳಿಸಿ,ಪರಿಸರ- ಪ್ರಕೃತಿ ಸಂರಕ್ಷಿಸಿ ಉತ್ತಮ ಜೀವನ ಕಂಡುಕೊಳ್ಳಿ, ಜಲವೇ ಜೀವಜಾಲ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿದ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0