ಮೈಸೂರು ತಾಲೂಕು ಕಚೇರಿಗೆ ಯದುವೀರ್‌ ಒಡೆಯರ್ ದಿಢೀರ್‌ ಭೇಟಿ : ಜನರ ಕೆಲಸ ತ್ವರಿತವಾಗಿ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ

Jan 8, 2026 - 15:23
 0  374
ಮೈಸೂರು ತಾಲೂಕು ಕಚೇರಿಗೆ ಯದುವೀರ್‌ ಒಡೆಯರ್ ದಿಢೀರ್‌ ಭೇಟಿ : ಜನರ ಕೆಲಸ ತ್ವರಿತವಾಗಿ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ

ಮೈಸೂರು, ಜ. 8: ಸಾರ್ವಜನಿಕರು ಸಮಸ್ಯೆಗಳನ್ನು ತಮ್ಮ ಬಳಿಗೆ ತಂದಾಗ ಅವುಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದ ಜನರನ್ನು ಪದೇಪದೆ ಕಚೇರಿಗಳಿಗೆ ಅಲೆಸುವ ಕೆಲಸ ಮಾಡಿಸಬೇಡಿ ಎಂದು ಅಧಿಕಾರಿಗಳಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ  ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೂಚನೆ ನೀಡಿದ್ದಾರೆ.

ಮೈಸೂರಿನ ಬಸ್‌ ನಿಲ್ದಾಣ ಸಮೀಪದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಂಸದ ಯದುವೀರ್‌ ಮಾಹಿತಿ ನೀಡಿದ್ದಾರೆ. ತಾಲೂಕು ಕಚೇರಿಯಲ್ಲಿನ ಕೆಲವು ಲೋಪದೋಷಗಳ ಕುರಿತು ಜನರು ಅಹವಾಲುಗಳನ್ನು ನನ್ನ ಕಚೇರಿಗೆ ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಇಂದು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು ಎಂದರು.

ನಿರ್ಲಕ್ಷ್ಯ ಮಾಡಿದರೆ ಕ್ರಮ: ತಾಲೂಕು ಕಚೇರಿಗಳಿಗೆ ಬರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ಇವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸದರು ಎಚ್ಚರಿಸಿದರು. ಕಚೇರಿಗೆ ತಡವಾಗಿ ಬಂದ ಸಿಬ್ಬಂದಿಯನ್ನು ಸಂಸದರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

 ನಂತರ ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಅವರೊಂದಿಗೆ ಇಡೀ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಕಚೇರಿಗೆ ಸಿಬ್ಬಂದಿ ತಡವಾಗಿ ಬರುವ ಹಾಗೂ ಕಚೇರಿಯಲ್ಲಿ ಇಲ್ಲದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಸಮಸ್ಯೆ ಬಗೆಹರಿಸಲು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ ಎಂದು ಸಂಸದರು ತಿಳಿಸಿದರು. ಕಚೇರಿಯಲ್ಲಿರುವ ಲಿಫ್ಟ್‌ ಕೆಟ್ಟು ನಿಂತಿತ್ತು, ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ಅದನ್ನೀಗ ರಿಪೇರಿ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಜನರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್‌ ತಿಳಿಸಿದರು.

 ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗುತ್ತಿರುವುದರಿಂದ ಭಾರಿ ತೊಂದರೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

 ತಾಲೂಕು ಕಚೇರಿ ಜನಸ್ನೇಹಿ ಕಚೇರಿಯಾಗಲಿ: ಒಟ್ಟಾರೆಯಾಗಿ ತಾಲೂಕು ಕಚೇರಿ ಜನ ಸ್ನೇಹಿ ಕಚೇರಿಯಾಗಿ ರೂಪುಗೊಳ್ಳಬೇಕು. ಈ ರೀತಿಯಾಗಿ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌, ಅಧಿಕಾರಿಗಳಿಗೆ, ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಕೇಂದ್ರದ ಸರ್ಕಾರದ ಯೋಜನೆ ಕುರಿತು ಪರಿಶೀಲನೆ; ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಭೂ ರಕ್ಷಣಾ ದಾಖಲೀಕರಣ ಯೋಜನೆ ಕುರಿತು ಸಂಸದರು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು. ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಮಾಡುವ ಯೋಜನೆಗಾಗಿ ಮೈಸೂರನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿರುವ ಆಧುನಿಕ ಅಭಿಲೇಖಾಲಯ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಡಿಜಿಟಲೀಕರಣ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು ಎಂದರು ತಿಳಿಸಿದರು. ಹಲವಾರು ದಶಕಗಳ ದಾಖಲೆಯ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆ ನಿಜಕ್ಕೂ ಜನಪರವಾಗಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0