ಯಾಂತ್ರಿಕೃತ ಭತ್ತ ಬೇಸಾಯದ "ಯಂತ್ರಶ್ರೀ" ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ
ವಿರಾಜಪೇಟೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿರಾಜಪೇಟೆ ತಾಲೂಕಿನ ಕೃಷಿ ಕಾರ್ಯಕ್ರಮದಡಿ, ಕಿರುಗೂರು ಕಾರ್ಯಕ್ಷೇತ್ರದ ಮುದ್ದಪ್ಪ ಅವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯದ "ಯಂತ್ರಶ್ರೀ" ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಭತ್ತದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೊನ್ನಂಪೇಟೆ ತಾಲೂಕು ಕೃಷಿ ಇಲಾಖೆ ಅಧಿಕಾರಿ ಮೀರಾ ಅವರು, "ಯಂತ್ರಶ್ರೀ ಯೋಜನೆಯು ಭತ್ತ ಬೆಳೆಯುವ ರೈತರಿಗಾಗಿಯೇ ರೂಪಿಸಲಾದ ವಿಶೇಷ ಯೋಜನೆಯಾಗಿದೆ. ಯಾಂತ್ರಿಕೃತ ಭತ್ತದ ನಾಟಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರ ಸಮಯ, ಶ್ರಮ ಹಾಗೂ ಕೃಷಿ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಪ ಅವಧಿಯಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಲು ಇದು ಸಾಧ್ಯವಾಗಿಸಲಿದ್ದು, ರೈತರು ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಸುರೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೃಷಿ ಯಂತ್ರಧಾರೆ' ಕೇಂದ್ರದ ಮೂಲಕ ಸುಲಭವಾಗಿ ನಾಟಿ ಯಂತ್ರಗಳು ಸಿಗುತ್ತಿರುವುದರಿಂದ ನಾವು ಸತತವಾಗಿ ಯಾಂತ್ರಿಕೃತ ನಾಟಿ ಮಾಡುತ್ತಿದ್ದೇವೆ. ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆಯಾಗಿರುವ ಕೂಲಿ ಆಳುಗಳ ಅಭಾವಕ್ಕೆ 'ಯಂತ್ರ ಶ್ರೀ' ಯೋಜನೆ ಅತ್ಯುತ್ತಮ ಪರಿಹಾರವಾಗಿದೆ"ಎಂದು ತಮ್ಮ ಅನುಭವ ಹಂಚಿಕೊಂಡರು.
ಕೇಂದ್ರ ಕಚೇರಿಯ ಕೃಷಿ ವಿಭಾಗದ ನಿರ್ದೇಶಕರಾದ ಶೇಖರ್ ಗೌಡ ಅವರು ಮುದ್ದಪ್ಪ ಅವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿಗೆ ಅಧಿಕೃತವಾಗಿ ಚಾಲನೆ ನೀಡಿ, ರೈತರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿಭಾಗದ ಯೋಜನಾಧಿಕಾರಿ ಬಾಲಕೃಷ್ಣ, ಯೋಜನಾಧಿಕಾರಿ ಮೋಹನ್, ಕೃಷಿ ಮೇಲ್ವಿಚಾರಕ ವಸಂತ್, ಸೇವಾಪ್ರತಿನಿಧಿಗಳಾದ ಬಿಂದು ಮತ್ತು ಪುಷ್ಪ, ಕಾವ್ಯ ಹಾಗೂ ಪ್ರಮುಖ ಪ್ರಗತಿಪರ ಕೃಷಿಕರಾದ ಸುಭಿಕ್ಷ, ಮುದ್ದಪ್ಪ, ಮಧು, ಮೀನಾ, ಪ್ರವೀಣ್, ಪೃಥ್ವಿರಾಜ್, ಜಾನಕಿ ಸೇರಿದಂತೆ ಹಲವು ರೈತ ಬಾಂಧವರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
