State News

ನಾಯಿಗಳು ಎಳೆದೊಯ್ದ ರುಂಡದಿಂದ ಬಯಲಾದ ಯುವಕನ ಆತ್ಮಹತ್ಯೆ

admincoorgdaily

Photo credit: Etv bharath

​ಬೆಂಗಳೂರು: ವರ್ತೂರು ಠಾಣೆ ವ್ಯಾಪ್ತಿಯ ಕೊಡತಿ ಸಮೀಪದ ಕ್ರಿಕೆಟ್ ಗ್ರೌಂಡ್‌ನಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾದ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಆರಂಭದಲ್ಲಿ ಇದೊಂದು ಭೀಕರ ಹತ್ಯೆ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತಾದರೂ, ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಆತ್ಮಹತ್ಯೆ ಎಂಬುದು ಬಯಲಾಗಿದೆ.​ ಮೃತನನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದ ವಿಶ್ವನಾಥ್ (25) ಎಂದು ಗುರುತಿಸಲಾಗಿದೆ.

 ವೈಯಕ್ತಿಕ ಕಾರಣದಿಂದ ನೊಂದಿದ್ದ ವಿಶ್ವನಾಥ್, ಮಂಗಳವಾರ ತನ್ನ ಸ್ನೇಹಿತೆಗೆ ಕರೆ ಮಾಡಿ ಮಾತನಾಡಿದ್ದ. ಬಳಿಕ ರಾತ್ರಿ 8:30ರಿಂದ 9 ಗಂಟೆ ಸುಮಾರಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ರೈಲು ಹರಿದ ರಭಸಕ್ಕೆ ತಲೆ ಆತನ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟು ದೂರಕ್ಕೆ ಎಸೆಯಲ್ಪಟ್ಟಿತ್ತು.​ ಘಟನೆಯ ಮಾಹಿತಿ ತಿಳಿದು ರಾತ್ರಿಯೇ ಸ್ಥಳಕ್ಕೆ ಆಗಮಿಸಿದ್ದ ರೈಲ್ವೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದರು. ಆದರೆ, ಕತ್ತಲಲ್ಲಿ ಕೇವಲ ತಲೆಯಿಲ್ಲದ ಶರೀರ ಮಾತ್ರ ರೈಲ್ವೆ ಪೊಲೀಸರಿಗೆ ಪತ್ತೆಯಾಗಿತ್ತು.

 ಕ್ರಿಕೆಟ್ ಗ್ರೌಂಡ್‌ಗೆ ರುಂಡ ತಂದ ಬೀದಿ ನಾಯಿಗಳು: ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದ ವಿಶ್ವನಾಥ್ ಅವರ ರುಂಡವನ್ನು ಬೀದಿ ನಾಯಿಗಳು ಕಚ್ಚಿಕೊಂಡು, ಸುಮಾರು 300 ಮೀಟರ್ ದೂರದಲ್ಲಿದ್ದ ಕ್ರಿಕೆಟ್ ಗ್ರೌಂಡ್‌ಗೆ ತಂದಿವೆ. ಬೆಳಗ್ಗೆ ಆಟವಾಡಲು ಬಂದ ಸ್ಥಳೀಯರು ರುಂಡವನ್ನು ಕಂಡು ಬೆಚ್ಚಿಬಿದ್ದು, ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣದ ತನಿಖೆ ಕೈಗೊಂಡು ನೈಜತೆಯನ್ನು ಪತ್ತೆ ಹಚ್ಚಿದ್ದಾರೆ.

 ರೈಲ್ವೆ ಪೊಲೀಸರಿಂದ ತನಿಖೆ: ''ಮೈದಾನದಲ್ಲಿ ರುಂಡ ಪತ್ತೆಯಾದ ಮಾಹಿತಿ ಬಂದ ತಕ್ಷಣ ವರ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಇನ್ನೊಂದೆಡೆ, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಕೂಡ ಇದೇ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ, ಕಳೆದ ರಾತ್ರಿ 8ರಿಂದ 9 ಗಂಟೆ ವೇಳೆಗೆ ರೈಲು ಅಪಘಾತದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವುದು ಗೊತ್ತಾಗಿದೆ. ರುಂಡ ಕಂಡುಬಂದ ಮೈದಾನದಿಂದ ಸುಮಾರು 300 ಮೀ ದೂರದಲ್ಲಿ ಪತ್ತೆಯಾದ ಮೃತದೇಹಕ್ಕೆ ತಲೆ ಇರಲಿಲ್ಲ. ಅಪಘಾತದ ಸಂದರ್ಭದಲ್ಲಿ ತಲೆ ಕಟ್​ ಆಗಿ ಸ್ವಲ್ಪ ದೂರ ಬಿದ್ದಿರಬಹುದು.

ಈಗಾಗಲೇ ರೈಲ್ವೆ ಪೊಲೀಸರು ಯುಡಿಆರ್​ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ಸಿ.ವಿ. ರಾಮನ್ ರವಾನಿಸಿದ್ದರು. ಸ್ಥಳದಲ್ಲಿ ಬಿದ್ದಿದ್ದ ರುಂಡವನ್ನು ನಾಯಿಗಳು ಕ್ರಿಕೆಟ್​ ಮೈದಾನಕ್ಕೆ ತಂದಿರುವ ಸಾಧ್ಯತೆಯಿದೆ. ಮೃತನನ್ನು 25 ವರ್ಷದ ಚಿತ್ತೂರಿನ ವ್ಯಕ್ತಿ ಎಂದು ರೈಲ್ವೆ ಪೊಲೀಸರು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದು, ರೈಲ್ವೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ'' ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.