ಇನ್‌ಸ್ಟಾಗ್ರಾಂ ನಲ್ಲಿ ಪರಿಚಯ | ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ನಡು ರಸ್ತೆಯಲ್ಲೇ ದೌರ್ಜನ್ಯ; ಆರೋಪಿಯ ಬಂಧನ,

Dec 24, 2025 - 21:30
Dec 25, 2025 - 10:16
 0  1.2k
ಇನ್‌ಸ್ಟಾಗ್ರಾಂ ನಲ್ಲಿ ಪರಿಚಯ | ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ನಡು ರಸ್ತೆಯಲ್ಲೇ ದೌರ್ಜನ್ಯ; ಆರೋಪಿಯ ಬಂಧನ,

ಬೆಂಗಳೂರು, ಡಿ. 24: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಯುವಕನೊಬ್ಬ ಪ್ರೀತಿ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದ ಯುವತಿಯ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ನವೀನ್ ಕುಮಾರ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸೋಮವಾರ ಜ್ಞಾನಭಾರತಿ ಸಮೀಪದ ಪಿಜಿ ನಿವಾಸದ ಬಳಿ ಯುವತಿ ನಿಂತಿದ್ದ ವೇಳೆ, ಕಾರಿನಲ್ಲಿ ಬಂದ ಆರೋಪಿ ಆಕೆಯನ್ನು ಕರೆಯಲು ಹಾರನ್ ಹೊಡೆದಿದ್ದಾನೆ. ಯುವತಿ ದೂರ ಸರಿಯಲು ಯತ್ನಿಸಿದಾಗ, ಆಕೆಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಕಸಿದುಕೊಂಡು ಎಳೆದಾಡಿ ಹಲವು ಬಾರಿ ಥಳಿಸಿದ್ದಾನೆ. ಈ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಇಬ್ಬರ ನಡುವೆ ಪರಿಚಯವಾಗಿದ್ದು, ನಂತರ ದೂರವಾಣಿ ಕರೆ ಹಾಗೂ ಸಂದೇಶಗಳ ಮೂಲಕ ಸಂಪರ್ಕ ಮುಂದುವರಿದಿತ್ತು. ಆರೋಪಿ ಯುವತಿಯನ್ನು ಪ್ರೀತಿಸಲು ಬಲವಂತಪಡಿಸುತ್ತಿದ್ದನೆಂಬ ಆರೋಪವಿದ್ದು, ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಂಭೀರ ವೈಮನಸ್ಸು ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರೂ, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1