ಪೊನ್ನಂಪೇಟೆ:ಯುವನಿಧಿ ಭಿತ್ತಿಪತ್ರ ಬಿಡುಗಡೆ

ಪೊನ್ನಂಪೇಟೆ:ಯುವನಿಧಿ ಭಿತ್ತಿಪತ್ರ ಬಿಡುಗಡೆ

ಮಡಿಕೇರಿ:ಪೊನ್ನಂಪೇಟೆಯ ತಾಲ್ಲೂಕು ಪಂಚಾಯತ್‍ನಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ 2025 ನೇ ಸಾಲಿನ ಯುವನಿಧಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡ ಪ್ರಯುಕ್ತ ಯುವನಿಧಿ ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಅನಾವರಣ ಮಾಡಲಾಯಿತು.

ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಅವರು ಮಾತನಾಡಿ 2023, 2024 ಮತ್ತು 2025 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ ಪಡೆದು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಈ ಯೋಜನೆಯಡಿ ಭತ್ಯೆ ಪಡೆಯಲು ಮುಂದುವರಿಸಬೇಕಾಗಿದ್ದಲ್ಲಿ ಪ್ರತಿ ತ್ರೈಮಾಸಿಕದಂತೆ, ತಾನು ಸಾರ್ವಜನಿಕ/ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿಲ್ಲವೆಂದು ಮತ್ತು ಸ್ವಯಂ ಉದ್ಯೋಗ ಮಾಡುತ್ತಿಲ್ಲವೆಂದು, ಉನ್ನತ ವ್ಯಾಸಂಗ ಮುಂದುವರಿಸುತ್ತಿಲ್ಲವೆಂದು ಸ್ವಯಂ ಘೋಷಣೆಯನ್ನು ನೀಡಬೇಕಿದೆ. ಯುವನಿಧಿ ಫಲಾನುಭವಿಗಳು ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಉಚಿತ ಕೌಶಲ್ಯ ತರಬೇತಿ ಪಡೆಯಬಹುದಾಗಿದ್ದು, ವೆಬ್‍ಸೈಟ್ ವಿಳಾಸ https://www.kaushalkar.com/app/registration_verify ಅನ್ನು ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1800-599-7154 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಡಿಕೇರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಐಟಿಐ ಮತ್ತು ಡಿಪ್ಲೋಮಾ ಮತ್ತು ಜೆಒಸಿ ಕೋರ್ಸ್ ಪಡೆದ ನಿರುದ್ಯೋಗಿಗಳು ಈ ಕಚೇರಿಯಲ್ಲಿ ಉದ್ಯೋಗ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.