ತನ್ನ ಕೈಯಾರೆ ಗಣಪತಿ ಮೂರ್ತಿ ತಯಾರಿಸಿದ ಮಡಿಕೇರಿ ಪುಟಾಣಿ ನಗರದ 17ರ ಯುವಕ
admincoorgdaily

ಮಡಿಕೇರಿ:-ನಾಡಿನೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.
ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲೂ ವಿಘ್ನೇಶ್ವರನ ಆರಾಧನೆ ಅದ್ಧೂರಿಯಾಗಿ ನಡೆಯುತ್ತಿದೆ.
ಇದರ ನಡುವೆ, ಮಡಿಕೇರಿಯ ಪುಟಾಣಿ ನಗರದ 17 ವರ್ಷದ ಯುವಕನೊಬ್ಬ ತನ್ನ ಕಲಾ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಹಗಲು-ರಾತ್ರಿ ಎನ್ನದೇ ಶ್ರಮಿಸಿ, ತನ್ನ ಕೈಯಾರೆ ವಿಶೇಷ ಗಣೇಶ ಮೂರ್ತಿಯನ್ನು ತಯಾರಿಸಿರುವ ಧನುಷ್, ಅದನ್ನು ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಗೆ ಕೊಡುಗೆಯಾಗಿ ನೀಡಿದ್ದಾನೆ.
ಇದು ಸಾಮಾನ್ಯ ಗಣೇಶ ಮೂರ್ತಿಯಲ್ಲ...
ನವಿಲಿನ ಮೇಲೆ ಕುಳಿತಿರುವ ವಿಘ್ನೇಶ್ವರನ ಸುಂದರ ರೂಪ...ತನ್ನ ಕಲ್ಪನೆಗೆ ರೂಪ ಕೊಟ್ಟು, ಗಣಪತಿ ಮೂರ್ತಿಯನ್ನು ಸ್ವತಃ ತಯಾರಿಸಿರುವ ಈ ಪುಟಾಣಿ ನಗರದ ಯುವಕನೇ ಧನುಷ್.
ಕಳೆದ ಹಲವಾರು ದಿನಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಧನುಷ್, ಹಗಲು-ರಾತ್ರಿ ಎನ್ನದೇ ಶ್ರಮಿಸಿ ಈ ವಿಶೇಷ ಮೂರ್ತಿಯನ್ನು ಸಿದ್ಧಪಡಿಸಿದ್ದಾನೆ.ನವಿಲಿನ ಮೇಲೆ ಗಣೇಶ ಕುಳಿತಿರುವ ರೀತಿಯಲ್ಲಿ ಮೂರ್ತಿಯನ್ನು ರೂಪಿಸಿರುವ ಧನುಷ್, ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಅದ್ಭುತವಾಗಿ ಹೊರಹಾಕಿದ್ದಾನೆ.
ಪುಟಾಣಿ ನಗರದ ತುಳಸಿ ಹಾಗೂ ಜೋಯಿ ದಂಪತಿಯ ಪುತ್ರನಾಗಿರುವ 17 ವರ್ಷದ ಧನುಷ್, ಗಣೇಶ ಹಬ್ಬದ ಸಂದರ್ಭದಲ್ಲಿ ತನ್ನ ಕಲೆಯನ್ನು ಸಮಾಜಕ್ಕೆ ಅರ್ಪಿಸಿದ್ದಾನೆ.
ತಾನು ತಯಾರಿಸಿದ ಗಣೇಶ ಮೂರ್ತಿಯನ್ನು ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಗೆ ಧನುಷ್ ನೀಡಿದ್ದು, ಇದೀಗ ಈ ವಿಶೇಷ ಮೂರ್ತಿಗೆ ಬಡಾವಣೆ ನಿವಾಸಿಗಳು ಭಕ್ತಿಭಾವದಿಂದ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸಣ್ಣ ವಯಸ್ಸಿನಲ್ಲೇ ತನ್ನ ಕೈಚಳಕದಿಂದ ಗಣೇಶನ ಮೂರ್ತಿಯನ್ನು ರೂಪಿಸಿರುವ ಧನುಷ್‌ನ ಕಲಾ ಪ್ರತಿಭೆಗೆ ಸ್ಥಳೀಯರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಬ್ಬದ ಸಂಭ್ರಮದ ನಡುವೆ, ಭಕ್ತಿಯ ಜೊತೆಗೆ ಯುವ ಪ್ರತಿಭೆಯೊಂದು ಅನಾವರಣಗೊಂಡಿದ್ದು, ನವಿಲಿನ ಮೇಲೆ ಕುಳಿತ ಗಣೇಶನ ಮೂರ್ತಿ ಇದೀಗ ಪುಟಾಣಿ ನಗರದ ಪ್ರಮುಖ ಆಕರ್ಷಣೆಯಾಗಿದೆ.