ಬಂಟಿಂಗ್ ಕಟ್ಟಲು ಹತ್ತಿದ್ದ 28ರ ಯುವಕ ಕಂಬದಿಂದ ಬಿದ್ದು ದುರ್ಮರಣ
admincoorgdaily

ಗೋಣಿಕೊಪ್ಪ, ಸೆ. 5:ಗಣೇಶೋತ್ಸವದ ಪ್ರಯುಕ್ತ ಬಂಟಿಂಗ್ ಅಲಂಕಾರ ಮಾಡುತ್ತಿದ್ದ ವೇಳೆ ಕಂಬದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ಚೆನ್ನಂಗೊಲ್ಲಿ ನಿವಾಸಿ ಗಣೇಶ್ (28) ಮೃತಪಟ್ಟ ದುರ್ದೈವಿ.
ಶ್ರೀ ವಿಷ್ಣ್ವೇಶ್ವರ ಸೇವಾ ಸಮಿತಿ ಚೆನ್ನಂಗೊಲ್ಲಿ ಎರಡನೇ ವರ್ಷದಲ್ಲಿ ಆಚರಿಸುತ್ತಿರುವ ಗಣೇಶ ಉತ್ಸವಕ್ಕೆ ಬಂಟಿಂಗ್ ಅಲಂಕಾರ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭ ಕಂಬದ ಎತ್ತರಕ್ಕೆ ಬಂಟಿಂಗ್ ಕಟ್ಟಲು ಮೇಲೆ ಹತ್ತಿದ್ದ ಗಣೇಶ್ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಣೇಶ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.