ಸರಣಿ ಅಪಘಾತಕ್ಕೆ ಬ್ರೇಕ್: ರಸ್ತೆಗಿಳಿದು ಹಂಪ್‌ಗಳಿಗೆ ಬಣ್ಣ ಬಳಿದ ಕರವೇ ಸ್ವಾಭಿಮಾನಿ ಸೇನೆ
admincoorgdaily

ಕುಶಾಲನಗರ: ಮೈಸೂರು-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಹಂಪ್‌ಗಳಿಗೆ ಬಣ್ಣ ಇಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕ ರಸ್ತೆಗಿಳಿದು ಜನಹಿತ ಕಾರ್ಯ ಮಾಡಿದೆ.
ಬೈಲಕುಪ್ಪೆ ಗೋಲ್ಡನ್ ಟೆಂಪಲ್‌ಗೆ ತಿರುಗುವ ರಸ್ತೆ ಪಕ್ಕದ ಹೆದ್ದಾರಿ ಹಂಪ್‌ಗಳು ಕಾಣಿಸದ ಕಾರಣ ವಾಹನಗಳು ವೇಗವಾಗಿ ಬಂದು ಅಪಘಾತಕ್ಕೀಡಾಗುತ್ತಿದ್ದವು. ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಸ್ವತಃ ಬಿಳಿ ಬಣ್ಣ ಬಳಿದು ದೂರದಿಂದಲೇ ಕಾಣುವಂತೆ ಮಾಡಿದ್ದಾರೆ.
ಒಟ್ಟು 6 ಹಂಪ್‌ಗಳಿಗೆ ಬಣ್ಣ ಬಳಿಯಲಾಗಿದೆ - ಗೋಲ್ಡನ್ ಟೆಂಪಲ್ ರಸ್ತೆ (1), ಹಳೆ ಮಾರ್ಕೆಟ್ ರಸ್ತೆ (2), ಐಬಿ ರಸ್ತೆ (2) ಮತ್ತು ಸೋಮವಾರಪೇಟೆ ಮುಖ್ಯ ರಸ್ತೆ (1).
ಕಾರ್ಯಾಚರಣೆಯಲ್ಲಿ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ, ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ನಾಸಿರ್, ಕಾರ್ಮಿಕ ಘಟಕದ ಅಧ್ಯಕ್ಷ ಆರ್.ಚಂದ್ರು, ಮಣಿಕಂಠ, ವಿ.ಪಿ. ಚಂದ್ರಶೇಖರ್, ನಿಶಾ, ಕ್ಲಿಫರ್ಡ್ ರೊಡ್ರಿಗಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇಲಾಖೆ ಮಾಡಬೇಕಿದ್ದ ಕೆಲಸವನ್ನು ಸಂಘಟನೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.