Kodagu

ವಿರಾಜಪೇಟೆಯಲ್ಲಿ ಸಮಸ್ಯೆಗಳ ಸುರಿಮಳೆ - ಅಧಿಕಾರಿಗಳ ವಿರುದ್ಧ ನಾಗರಿಕ ಸಮಿತಿ ಕೆಂಡಾಮಂಡಲ!

admincoorgdaily

ವಿರಾಜಪೇಟೆಯಲ್ಲಿ ಸಮಸ್ಯೆಗಳ ಸುರಿಮಳೆ - ಅಧಿಕಾರಿಗಳ ವಿರುದ್ಧ ನಾಗರಿಕ ಸಮಿತಿ ಕೆಂಡಾಮಂಡಲ!
ವಿರಾಜಪೇಟೆ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ, ಆಡಳಿತಾತ್ಮಕ ಲೋಪದೋಷಗಳು, ಭ್ರಷ್ಟಾಚಾರ, ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ನಿರಂತರ ಕಿರುಕುಳಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಗ್ರಹಿಸಿ ನಾಗರಿಕ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
   
  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಮಾಲೇಟಿರ ಎಸ್. ಕಾಳಯ್ಯ ಅವರು ಪಟ್ಟಣದ ಗಂಭೀರ ವಾಹನ ದಟ್ಟಣೆ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ವಿರಾಜಪೇಟೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಮನೆ ಮತ್ತು ಕಟ್ಟಡ ಮಾಲೀಕರಿಗೆ ಕಾನೂನುಬದ್ಧವಾಗಿ ಸೂಕ್ತ ಪರಿಹಾರ ನೀಡಿ ಜಾಗವನ್ನು ಪಡೆದುಕೊಂಡು, ರಸ್ತೆ ಅಗಲೀಕರಣದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿದರು.   

  ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳನ್ನು ಸೂಕ್ತವಾಗಿ ಮುಚ್ಚಿ, ಮಳೆ ನೀರು ಸುಗಮವಾಗಿ ಹರಿದು ಹೋಗುವಂತೆ ಚರಂಡಿಗಳ ಸರಿಯಾದ ನಿರ್ವಹಣೆ ಮಾಡಬೇಕು. ವಾಹನ ಚಾಲಕರು ಅಡ್ಡಾದಿಡ್ಡಿ ಸಂಚರಿಸುವುದು ಮತ್ತು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಅಗಾಧ ತೊಂದರೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊರಗಿನಿಂದ ಬರುವ ವಾಹನ ಸವಾರರು ತಮ್ಮ ವಾಹನಗಳನ್ನು ಪಟ್ಟಣದಲ್ಲೇ ದಿನಗಟ್ಟಲೆ ನಿಲ್ಲಿಸಿ ಬೆಂಗಳೂರು ಅಥವಾ ಇತರ ಊರುಗಳಿಗೆ, ಕ್ಲಬ್‌ಗಳಿಗೆ ಹೋಗುತ್ತಿದ್ದಾರೆ. ಇಂತಹ ದೀರ್ಘಾವಧಿ ಪಾರ್ಕಿಂಗ್ ತಡೆಯಲು ನಿಯಮಿತ ಸಮಯಕ್ಕಿಂತ ಹೆಚ್ಚು ನಿಲ್ಲಿಸುವ ವಾಹನಗಳಿಗೆ ಗಂಟೆಯ ಆಧಾರದಲ್ಲಿ ದಂಡ/ಶುಲ್ಕ ವಿಧಿಸಬೇಕು. ನೂತನವಾಗಿ ನಿರ್ಮಿಸುವ ಕಟ್ಟಡಗಳ ತಳಭಾಗದಲ್ಲಿ (ಸೆಲ್ಲಾರ್) ವಾಹನ ಪಾರ್ಕಿಂಗ್‌ಗೆ ಜಾಗ ಮೀಸಲಿಡಬೇಕು ಎಂಬ ನಿಯಮವಿದ್ದರೂ, ಪಂಚಾಯತ್ ಆಡಳಿತದವರ ಪ್ರತ್ಯಕ್ಷ ಅಥವಾ ಪರೋಕ್ಷ ಸಹಯೋಗದಿಂದ ಕಟ್ಟಡ ಮಾಲೀಕರು ನಿಯಮ ಉಲ್ಲಂಘಿಸಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿ ದುಬಾರಿ ಹಣ ಗಳಿಸುತ್ತಿದ್ದಾರೆ. ಇಂತಹ ಶರತ್ತು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ಪುರಸಭೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದರು. 

  ಮುಖಂಡ ಪಿ. ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಕೇರಳದಿಂದ ಕೆಂಪು ಕಲ್ಲು ತರುವಾಗ ಕೆಲವು ನಿಯಮ ಹಾಗೂ ನಿರ್ಬಂಧಗಳಿದ್ದು, ಇವುಗಳನ್ನೇ ಬಂಡವಾಳ ಮಾಡಿಕೊಂಡು ಆಯಾ ಕಾಲದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರಭಾವಿ ನಾಯಕರು ಹಾಗೂ ಶಾಸಕರ ಪಟ್ಟ ಶಿಷ್ಯರು, ಅಧಿಕಾರಿಗಳ ಮೂಲಕ ವಾಹನ ಸವಾರರಿಂದ ನೇರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ರೀತಿಯ ಅಕ್ರಮ ಹಫ್ತಾ ವಸೂಲಿಯನ್ನು ತಕ್ಷಣವೇ ಬಂದ್ ಮಾಡಬೇಕು. ಸರ್ಕಾರವೇ ಅಧಿಕೃತವಾಗಿ ಕೆಂಪು ಕಲ್ಲುಗಳ ಮೇಲೆ ಸೂಕ್ತ ಶುಲ್ಕವನ್ನು ನಿಗದಿಪಡಿಸಿ, ಅಧಿಕೃತ ರಶೀದಿ ನೀಡಿ ಕೊಡಗಿಗೆ ತರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.   

  ಗ್ಯಾಸ್ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಮಾತನಾಡಿದ ಮುಖಂಡ ಎಚ್.ಬಿ. ಸತೀಶ್ ಕುಮಾರ್ ಅವರು, ವಿರಾಜಪೇಟೆಯಲ್ಲಿ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ ವಿತರಣೆಯಲ್ಲಿ ಏಜೆನ್ಸಿಯು ಗ್ರಾಹಕರಿಗೆ ನಿರಂತರವಾಗಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು. 

ಗ್ರಾಹಕರು ಖಾಲಿ ಸಿಲಿಂಡರ್ ಬುಕ್ ಮಾಡಲು ಯತ್ನಿಸಿದಾಗ ಬುಕಿಂಗ್ ಆಗುವುದಿಲ್ಲ. ಕಚೇರಿಗೆ ಅಥವಾ ವಿತರಕರಿಗೆ ಫೋನ್ ಮಾಡಿದಾಗ ಕೆಲ ದಿನಗಳ ನಂತರ ಕರೆ ಸ್ವೀಕರಿಸಿ 'ಮತ್ತೆ ಬುಕ್ ಮಾಡಿ' ಎಂದು ಹೇಳಿ ದಿನ ದೂಡುತ್ತಾರೆ. ವಿಶೇಷವಾಗಿ ತಿಂಗಳ ಕೊನೆಯ ದಿನಗಳಲ್ಲಿ (29 ಅಥವಾ 30 ರಂದು) ಗ್ಯಾಸ್ ಬುಕ್ ಮಾಡಿದಾಗ 'ಸಿಸ್ಟಮ್ ರಿಫ್ರೆಶ್' ಎಂಬ ನೆಪವೊಡ್ಡಿ ಆ ಆರ್ಡರ್‌ಗಳನ್ನು ರದ್ದುಗೊಳಿಸಿ, ಗ್ರಾಹಕರು ಆ ತಿಂಗಳ ಸಿಲಿಂಡರ್ ಕಳೆದುಕೊಳ್ಳುವಂತೆ ಮಾಡಲಾಗುತ್ತಿದೆ. ಹೀಗೆ ಗ್ರಾಹಕರಿಗೆ ವಂಚಿಸಿ ಉಳಿಸುವ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಏಜೆನ್ಸಿಯವರು ತಮ್ಮ ಅನುಕೂಲಕ್ಕಾಗಿ ಕಂಪ್ಯೂಟರ್‌ನಲ್ಲಿ ತಾವೇ ನಿಯಮ ಸೃಷ್ಟಿಸಿಕೊಂಡು ಸಾರ್ವಜನಿಕರನ್ನು ಪೀಡಿಸುತ್ತಿದ್ದು, ಕಚೇರಿಯಲ್ಲಿ ಸರಿಯಾದ ಸ್ಪಂದನೆ ನೀಡಬೇಕು ಹಾಗೂ ಬಾಕಿ ಸಿಲಿಂಡರ್ ತಲುಪಿಸಬೇಕು. ತಪ್ಪಿದಲ್ಲಿ ಏಜೆನ್ಸಿಯ ವಿರುದ್ಧ ನಿರಂತರ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.   

  ಸ್ಥಿರ ಆಡಳಿತದ ಕುರಿತು ಮಾತನಾಡಿದ ಮುಖಂಡ ಎನ್.ಕೆ. ಅಬ್ದುಲ್ ರೆಹಮಾನ್ ಅವರು, ವಿರಾಜಪೇಟೆ ಪುರಸಭೆಗೆ ಇನ್ಯಾವುದೋ ಇಲಾಖೆಯಿಂದ ತಾತ್ಕಾಲಿಕವಾಗಿ ಮುಖ್ಯಾಧಿಕಾರಿಗಳನ್ನು ನೇಮಿಸುತ್ತಿರುವುದರಿಂದ, ಅವರಿಗೆ ಸ್ಥಳೀಯ ಸಮಸ್ಯೆಗಳ ಸೂಕ್ತ ತಿಳಿವಳಿಕೆ ಇಲ್ಲದೆ ಸಾರ್ವಜನಿಕರು ತೀವ್ರ ಹಿಂಸೆ ಅನುಭವಿಸುವಂತಾಗಿದೆ ಎಂದು ದೂರಿದರು. ಆದ್ದರಿಂದ ವಿರಾಜಪೇಟೆ ಪುರಸಭೆಗೆ ತಕ್ಷಣವೇ ಒಬ್ಬ ಸ್ಥಿರ (ಶಾಶ್ವತ) ಮುಖ್ಯಾಧಿಕಾರಿಯನ್ನು ನೇಮಕ ಮಾಡಬೇಕು. ಜೊತೆಗೆ ಹಲವಾರು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಠಿಕಾಣಿ ಹೂಡಿ, ಸಾರ್ವಜನಿಕರ ಕೆಲಸ ಮಾಡಿಕೊಡದೆ ಭ್ರಷ್ಟಾಚಾರ ಹಾಗೂ ದುಡ್ಡು ಮಾಡುವುದರಲ್ಲೇ ಮಗ್ನರಾಗಿರುವ ಸಿಬ್ಬಂದಿಗಳನ್ನು ತಕ್ಷಣವೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.   

  ಪಟ್ಟಣದ ಮಾಲಿನ್ಯದ ಕುರಿತು ಮಾತನಾಡಿದ ಮುಖಂಡ ಎಂ. ಕೆ. ಗಣೇಶ್ ಅವರು, ವಿರಾಜಪೇಟೆ ಪುರಸಭೆಯು ಸೇವಾ ಸಂಸ್ಥೆಯಾಗದೆ ಸಂಪೂರ್ಣವಾಗಿ ವ್ಯಾಪಾರ ಮಾರ್ಕೆಟ್‌ನಂತಾಗಿದೆ, ಇಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದಲ್ಲಿರುವ ಸಿಮೆಂಟ್ ಅಂಗಡಿಯೊಂದರದ 24 ಗಂಟೆಯೂ ನಿರಂತರವಾಗಿ ಏಳುವ ಸಿಮೆಂಟ್ ಧೂಳಿನಿಂದಾಗಿ ಪಕ್ಕದ ನಿವಾಸಿಗಳು, ಶಾಲಾ ಮಕ್ಕಳು, ವೃದ್ಧರು ಹಾಗೂ ಪಕ್ಕದಲ್ಲೇ ಇರುವ ಲ್ಯಾಬ್‌ಗೆ ಬರುವ ರೋಗಿಗಳು ತೀವ್ರ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ (ಆಅ) ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳೇ ಈ ಮಾಲಿನ್ಯಕಾರಕರ ಜೊತೆ ಶಾಮಿಲಾಗಿದ್ದಾರೆ.
 ಸಾರ್ವಜನಿಕರು ಎಷ್ಟೇ ನೋವು ತಿಂದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣವೇ ಸಿಮೆಂಟ್ ಧೂಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಪಟ್ಟಣದಲ್ಲಿರುವ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

   ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ವಿರಾಜಪೇಟೆ ಪಟ್ಟಣದಲ್ಲಿ ಸಾರ್ವಜನಿಕರನ್ನು ಕಾಡುತ್ತಿರುವ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಗಮನಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. 

ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಲ್ಲಿ, ಪಟ್ಟಣದ ಎಲ್ಲಾ ನಾಗರಿಕರನ್ನು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ರೀತಿಯ ನಿರಂತರ ಹೋರಾಟ ಹಾಗೂ ಬೃಹತ್ ಪ್ರತಿಭಟನೆಯನ್ನು ಸಂಘಟಿಸಲಾಗುವುದು" ಎಂದು ಪ್ರಬಲ ಎಚ್ಚರಿಕೆ ನೀಡಿದರು.