ಚೆಯ್ಯಂಡಾಣೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸತೀಶ್ ಗೆ ಆತ್ಮೀಯ ಬೀಳ್ಕೊಡುಗೆ
admincoorgdaily

ನಾಪೋಕ್ಲು :ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಎಲ್.ಸತೀಶ್ ಅವರನ್ನು ಅಂಚೆ ಇಲಾಖೆಯ ವತಿಯಿಂದ ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಡಿಕೇರಿ ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಾದ ಶ್ರೀಧರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸತೀಶ್ ಅವರು ಅಂಚೆ ಇಲಾಖೆಯಲ್ಲಿ 19 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ಭಾರತೀಯ ವಾಯುಪಡೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಅಂಚೆ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿರುವುದು ನಿಜಕ್ಕೂ ಶ್ಲಾಘನೀಯ. ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ನಿವೃತ್ತ ಪೋಸ್ಟ್ ಮಾಸ್ಟರ್ ಸತೀಶ್ ಅವರು ಮಾತನಾಡಿ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು. ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿದರು.
ಈ ಸಂದರ್ಭ ಇಲಾಖೆಯ ಮೇಲ್ವಿಚಾರಕರಾದ ಹರೀಶ್, ಅಂಚೆ ಸಹಾಯಕರಾದ ಮೀನಾಕ್ಷಿ ಹಾಗೂ ಅಂಚೆ ವಿತರಕರಾದ ಉತ್ತಪ್ಪ ಅವರು ಮಾತನಾಡಿ, ಸತೀಶ್ ಅವರ ಸೇವೆ ಮತ್ತು ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಚೆಯ್ಯಂಡಾಣೆ ಅಂಚೆ ಕಚೇರಿಯ ಸಿಬ್ಬಂದಿಗಳು ಹಾಗೂ ಚೆಯ್ಯಂಡಾಣೆ ವ್ಯಾಪ್ತಿಗೆ ಒಳಪಡುವ ವಿವಿಧ ಅಂಚೆ ಕಚೇರಿಗಳ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಸ್ವಾಗತಿಸಿ, ವಂದಿಸಿದರು.
ವರದಿ :ಝಕರಿಯ ನಾಪೋಕ್ಲು