ಸಂತ್ರಸ್ತರ ಜಾಗದಲ್ಲಿ ತಲೆಎತ್ತಿದ ಕಸ ವಿಲೇವಾರಿ ತಾಣ: ಕಾವೇರಿ ಒಡಲಿಗೆ ಪ್ಲಾಸ್ಟಿಕ್!
admincoorgdaily

ಸಿದ್ದಾಪುರ: ಜಿಲ್ಲೆಯಲ್ಲಿ ತೀವ್ರ ಮಳೆಯ ಕೊರತೆಯಿಂದ ಕಾವೇರಿ ನದಿಯ ನೀರಿನ ಮಟ್ಟ ಅಕ್ಟೋಬರ್ ತಿಂಗಳಲ್ಲೇ ಗಣನೀಯವಾಗಿ ಕುಸಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ನಡುವೆ 2018-19ರಲ್ಲಿ ಕಾವೇರಿ ನದಿ ತೀರದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡ ಪ್ರದೇಶಗಳು ಈಗ ಕಸ ವಿಲೇವಾರಿ ಘಟಕಗಳಂತಾಗಿವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ನೇರವಾಗಿ ನದಿಗೆ ಎಸೆಯಲಾಗುತ್ತಿದ್ದು, ಕರಡಿಗೋಡು ಗ್ರಾಮದ ಆದಂ ಅವರ ಮನೆ ಮುಂಭಾಗದ ನದಿ ದಡದಲ್ಲಿ ಈ ದೃಶ್ಯ ಕಂಡುಬಂದಿದೆ.
ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹುದಾದ ಸಾಧ್ಯತೆ ಇದ್ದು, ನದಿ ಹಾಗೂ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಡೆಗಟ್ಟಿ ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಸಂಘ-ಸಂಸ್ಥೆಗಳು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನದಿ ದಂಡೆಯ ನಿವಾಸಿಗಳಲ್ಲಿ ಅರಿವು ಮೂಡಿಸಬೇಕಾಗಿದೆ.
ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಪಟ್ಟಣ ಸೇರಿದಂತೆ ಬಹುತೇಕ ಪಟ್ಟಣಗಳು ಚರಂಡಿ ತ್ಯಾಜ್ಯ ನೀರನ್ನು ನೇರವಾಗಿ ಹಾಗೂ ತೋಡುಗಳ ಮೂಲಕ ಕಾವೇರಿ ನದಿಗೆ ಹರಿಸುತ್ತಿದ್ದು, ಜಲಮೂಲ ಸಂರಕ್ಷಣೆಯ ಹೊಣೆ ಹೊತ್ತ ಆಡಳಿತ ವ್ಯವಸ್ಥೆ ತನ್ನ ತಪ್ಪನ್ನು ಸರಿಪಡಿಸಬೇಕಿದೆ.