ಕುವೈತ್‌ನಿಂದ ಬೆಂಗಳೂರಿಗೆ ಬಂದಿಳಿದ ಕೊಡಗಿನ ವ್ಯಕ್ತಿ ವಿಮಾನ ನಿಲ್ದಾಣದಲ್ಲೇ ಹೃದಯಾಘಾತಕ್ಕೆ ಬಲಿ
admincoorgdaily

ಬೆಂಗಳೂರು: ವರ್ಷಗಳ ಕಾಲ ಕುವೈತ್‌ನಲ್ಲಿ ದುಡಿದು ಕುಟುಂಬದೊಂದಿಗೆ ಸಮಯ ಕಳೆಯಲು ಸ್ವದೇಶಕ್ಕೆ ಮರಳಿದ್ದ ಸುಂಟಿಕೊಪ್ಪದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ.
ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿ.ಮೀ ದೂರದ ಕುವೈತ್‌ಗೆ ತೆರಳಿದ್ದ ಬಶೀರ್, ಹಲವು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸುಂಟಿಕೊಪ್ಪದಲ್ಲಿದ್ದು, ಬಶೀರ್ ಕಳುಹಿಸುತ್ತಿದ್ದ ಹಣದಲ್ಲೇ ಕುಟುಂಬದ ಜೀವನ ಸಾಗುತ್ತಿತ್ತು.
ವರ್ಷಗಳ ಬಳಿಕ ಸಿಕ್ಕ ರಜೆಯಲ್ಲಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯುವ ಆಸೆಯಿಂದ ಬಶೀರ್ ನಿನ್ನೆ ತಡರಾತ್ರಿ ಸುಮಾರು 3 ಗಂಟೆಗೆ ಕುವೈತ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನದಿಂದ ಇಳಿಯುತ್ತಿದ್ದಂತೆ ಏಕಾಏಕಿ ಎದೆನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದು ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದು, ಮೃತದೇಹವನ್ನು ಇಂದು ಸುಂಟಿಕೊಪ್ಪಕ್ಕೆ ತರಲಾಗುತ್ತಿದೆ. ಕುಟುಂಬಸ್ಥರು ಹಾಗೂ ಬಂಧು-ಬಳಗದ ಅಂತಿಮ ದರ್ಶನದ ಬಳಿಕ ಇಂದು ಮಧ್ಯಾಹ್ನ 3 ಗಂಟೆಯ ನಂತರ 7ನೇ ಹೊಸಕೋಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕುಟುಂಬದೊಂದಿಗೆ ಸಂತಸದ ಕ್ಷಣ ಕಳೆಯಲು ಬಂದಿದ್ದ ವ್ಯಕ್ತಿ ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವುದು ಸುಂಟಿಕೊಪ್ಪದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.