ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಪೌಷ್ಟಿಕ ಆಹಾರ ಸಹಕಾರಿ
admincoorgdaily

ಮಡಿಕೇರಿ:-ಪೋಷಣ್ ಮಾಸಾಚರಣೆಯ ಅಂಗವಾಗಿ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಅವರು, ಮಕ್ಕಳಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಲು ಸಮತೋಲನ ಆಹಾರ ಸೇವನೆ ಅತ್ಯಗತ್ಯ ಎಂದರು.
ಸಿರಿಧಾನ್ಯಗಳು, ಸ್ಥಳೀಯವಾಗಿ ದೊರೆಯುವ ಹಣ್ಣುಗಳು, ಸೊಪ್ಪುಗಳು, ವಿಶೇಷವಾಗಿ ನುಗ್ಗೆ ಸೊಪ್ಪು ಹಾಗೂ ವಿವಿಧ ತರಕಾರಿಗಳನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸುವಂತೆ ಕರೆ ನೀಡಿದರು.
ಮಕ್ಕಳಲ್ಲಿ ಜಂತುಹುಳುವಿನ ಬಾಧೆಯಿಂದಲೂ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಮಾತ್ರೆಗಳನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಬೇಕು ಎಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮಾರಾಟ, ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯಂತಹ ಸಾಮಾಜಿಕ ಪಿಡುಗುಗಳ ಕುರಿತು ಅರಿವು ಮೂಡಿಸಿದರು.
ಅಲ್ಲದೆ, ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗೆ ಫಲಾನುಭವಿಗಳು ದೂರವಾಣಿ ಸಂಖ್ಯೆ ಹೊಂದಿರುವ ಆಧಾರ್ ಕಾರ್ಡ್, ಸಾಲರಹಿತ ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಸರಿಪಡಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಹಕರಿಸುವಂತೆ ತಿಳಿಸಿದರು.
“ಬಣ್ಣ ಬಣ್ಣದ ತರಕಾರಿಗಳನ್ನು ತಿನ್ನದಿದ್ದರೆ, ಬಣ್ಣ ಬಣ್ಣದ ಮಾತ್ರೆಗಳನ್ನು ತಿನ್ನಬೇಕಾಗುತ್ತದೆ” ಎಂಬ ಸಂದೇಶವನ್ನು ಹೂವಿನ ರಂಗೋಲಿಯ ಮೂಲಕ ಪ್ರದರ್ಶಿಸಿ ಫಲಾನುಭವಿಗಳ ಗಮನ ಸೆಳೆಯಲಾಯಿತು.
ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಕಸಬಾ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪಾರಿಜಾತ ನೆರವೇರಿಸಿದರು. ಇಂದಿರಾ ಸ್ವಾಗತಿಸಿದರು. ಮುತ್ತಮ್ಮ ನಿರೂಪಿಸಿದರು. ಸುಜಾತಾ ವಂದಿಸಿದರು.