ಅಪಘಾತದಲ್ಲಿ ಪೋಷಕರು, ಸಹೋದರಿಯನ್ನು ಕಳೆದುಕೊಂಡ ಬಾಲಕಿಗೆ ಪೊಲೀಸ್ ಅಧಿಕಾರಿಯ ಪ್ರೀತಿಯ ಅಪ್ಪುಗೆ:ಮಾನವೀಯತೆ ಮೆರೆದ ಪಿಎಸ್‌ಐ ಮಂಜುನಾಥ್
admincoorgdaily

ಸಿದ್ದಾಪುರ: ಅಪಘಾತದಲ್ಲಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡ 9 ವರ್ಷದ ಬಾಲಕಿ ದೀಕ್ಷಾಳಿಗೆ ಹುಟ್ಟುಹಬ್ಬ ಆಚರಿಸುವ ಮೂಲಕ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾನವೀಯತೆ ಮೆರೆದಿದ್ದಾರೆ.
ಅಕ್ಟೋಬರ್ 20ರಂದು ಸಿದ್ದಾಪುರದಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದ ರಸಮಂಜರಿ ವೀಕ್ಷಿಸಿ ವಾಪಸ್ಸಾಗುತ್ತಿದ್ದ ವೇಳೆ ಸಿದ್ದಾಪುರದಲ್ಲಿರುವ ಚಿಕ್ಕಪ್ಪನ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ ದಟ್ಟ ಮಂಜು ಆವರಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಮುಗುಚಿತ್ತು. ಪರಿಣಾಮ ವಾಹನದಲ್ಲಿದ್ದ ವಿಜೇಶ್, ಪತ್ನಿ ಪಮಿತ ಹಾಗೂ ಪುತ್ರಿ ಲಿಯಾ ಮೃತಪಟ್ಟಿದ್ದರು. ಅಂದು ಕುಟುಂಬದೊಂದಿಗೆ ರಸಮಂಜರಿ ವೀಕ್ಷಿಸಿದ್ದ ವಿಜೇಶ್ ಅವರ ಹಿರಿಯ ಪುತ್ರಿ ದೀಕ್ಷಾ ಕಾರ್ಯಕ್ರಮದ ಬಳಿಕ ಸಿದ್ದಾಪುರದಲ್ಲಿರುವ ಚಿಕ್ಕಪ್ಪನ ಮನೆಗೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಳು.
ಅಪಘಾತದಲ್ಲಿ ತಂದೆ, ತಾಯಿ ಹಾಗೂ ಮೂರು ವರ್ಷದ ತಂಗಿಯನ್ನು ಕಳೆದುಕೊಂಡ ಬಾಲಕಿಯ ಹುಟ್ಟುಹಬ್ಬವನ್ನು ಖುದ್ದಾಗಿ ಮನೆಗೆ ತೆರಳಿ ನೋವಿನಲ್ಲಿದ್ದ ಬಾಲಕಿಯ ಹುಟ್ಟುಹಬ್ಬದ ಆಚರಿಸುವ ಮೂಲಕ ಸಿದ್ದಾಪುರ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮಾನವೀಯತೆ ಮರೆದಿದ್ದಾರೆ.
ಕೇಕ್ ಖರೀದಿಸಿ ಮುದ್ದಾಗಿ ಬಾಲಕಿಯ ಸಿದ್ದಾಪುರ ಗ್ರಾಮದ ಹೈಸ್ಕೂಲ್ ಹೈಸಾರಿ ಮನೆಗೆ ತೆರಳಿದ್ದಾರೆ. ಬಾಲಕಿಯೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಆಕೆಗೆ ಶುಭ ಹಾರೈಸಿ ಆಶೀರ್ವದಿಸಿದ್ದಾರೆ.
ಬಾಲಕಿಯ ದುಃಖದ ಸಂದರ್ಭದಲ್ಲಿ ಆಕೆಗೆ ಪ್ರೀತಿ ಹಾಗೂ ಆತ್ಮೀಯತೆಯ ಆಸರೆಯಾಗಿ ನಿಂತ ಪೊಲೀಸ್ ಅಧಿಕಾರಿಯ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಮಾನವೀಯ ಕಾರ್ಯಗಳಿಂದ ಜನಮೆಚ್ಚುಗೆ ಗಳಿಸಿದ ಅಧಿಕಾರಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್, ಕಳೆದ ಎರಡು ವರ್ಷಗಳಿಂದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಇವರು, ಪೊಲೀಸ್ ಕರ್ತವ್ಯದ ಜೊತೆಗೆ ತಮ್ಮ ವ್ಯಾಪ್ತಿಯ ನಿಗತಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೆ ನೆರವಾಗುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.