ಅನ್ನ ಹಾಕಿದ ಅಮ್ಮನನ್ನೇ ಕೊಂದ ಮಗನಂತಿದ್ದ ಪಾಪಿ; ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟದ ನಾಟಕ - ವಿಚಾರಣೆಯಲ್ಲಿ ಸಿಕ್ಕಿಬಿದ್ದ ಕೊಲೆಗಾರ ಆಟೋ ಚಾಲಕ
admincoorgdaily

ಕುಶಾಲನಗರ/ಬೈಲುಕುಪ್ಪೆ; ತನಗೆ ಅನ್ನ ಹಾಕಿ, ಸ್ವಂತ ಮಗನಂತೆ ಸಾಕಿದ ತಾಯಿಯಂತಿದ್ದ ವೃದ್ಧೆಯನ್ನೇ ಹಣ ಮತ್ತು ಚಿನ್ನದ ಆಸೆಗೆ ಬಿದ್ದು ಆಟೋ ಚಾಲಕನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಕರುಣಾಜನಕ ಘಟನೆ ಕೊಡಗು ಹಾಗೂ ಮೈಸೂರು ಗಡಿಭಾಗದಲ್ಲಿ ನಡೆದಿದೆ.
ಕೊಲೆಯಾದವರು ಯಾರು?
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಬಡಾವಣೆಯ ನಿವಾಸಿ, ವಿಶ್ರಾಂತ ನೌಕರರಾಗಿದ್ದ ರುದ್ರಮ್ಮ (65) ಕೊಲೆಯಾದ ದುರದೃಷ್ಟಕರ ವೃದ್ಧೆ. ರುದ್ರಮ್ಮ ಅವರು ಕೂಡಿಗೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಬಂದ ಹಣದಲ್ಲಿ ಮನೆ ಖರೀದಿಸಿ ಮಗಳು ಸಾವಿತ್ರಿ, ಅಳಿಯ ಹಾಗೂ ಮೊಮ್ಮಗನ ಜೊತೆ ನೆಮ್ಮದಿಯಿಂದ ವಾಸವಾಗಿದ್ದರು. ಅಲ್ಲದೆ, ದಿನನಿತ್ಯದ ಖರ್ಚಿಗೆ ಒಂದಷ್ಟು ಹಣವನ್ನು ಬಡ್ಡಿಗೆ ನೀಡುತ್ತಿದ್ದರು.
ನಂಬಿಕೆಗೆ ದ್ರೋಹ ಬಗೆದ ‘ಮಗನಂತಹ’ ಚಾಲಕ;
ಇದೇ ಕಂಪನಿಯಲ್ಲಿ ಪರಿಚಯವಾಗಿದ್ದ ಆಟೋ ಚಾಲಕ ಕುಮಾರನಿಗೆ ರುದ್ರಮ್ಮ ತಮ್ಮ ಸ್ವಂತ ಮಗನಂತೆಯೇ ಸ್ಥಾನ ನೀಡಿದ್ದರು. ಬಡ್ಡಿ ವ್ಯವಹಾರ ಸೇರಿ ಯಾವುದೇ ಕೆಲಸಕ್ಕೂ ಈತನ ಆಟೋವನ್ನೇ ಬಳಸುತ್ತಿದ್ದರು. ಮನೆಗೆ ಕರೆದು ಊಟವನ್ನೂ ಹಾಕುತ್ತಿದ್ದರು. ಪ್ರೀತಿಯಿಂದ ಸಾಕಿದ ನಾಯಿ ‘ಜಿಮ್ಮಿ’ ಕಾಲಿಗೆ ಅಡ್ಡಬಂದು ಹೋಗಬೇಡ ಎಂದು ತಡೆದರೂ, ಅದನ್ನೇ ಬೈದು ಪಕ್ಕಕ್ಕೆ ತಳ್ಳಿ ಆಟೋ ಹತ್ತಿದ ಆ ಅಮ್ಮನಿಗೆ ತಾನು ನಂಬಿದ ‘ಮಗನಂತಹ’ ವ್ಯಕ್ತಿಯೇ ತನ್ನ ಕುತ್ತಿಗೆ ಹಿಸುಕಿ ಹೆಣ ಮಾಡುತ್ತಾನೆ ಎಂಬ ಸಣ್ಣ ಅನುಮಾನವೂ ಇರಲಿಲ್ಲ.
ಹಣಕ್ಕಾಗಿ ಸಂಚು - ಹೇಗೆ ಕೊಲೆ ಮಾಡಿದ?
ಶನಿವಾರದಂದು ರುದ್ರಮ್ಮ ಬ್ಯಾಂಕ್‌ನಿಂದ ರೂ 50,000 ನಗದು ಹಿಂಪಡೆದಿದ್ದರು. ಇದನ್ನು ಗಮನಿಸಿದ್ದ ಕುಮಾರ, ಹಣ ಹಾಗೂ ಅವರ ಮೈಮೇಲಿದ್ದ ಬಂಗಾರದ ಆಭರಣಗಳನ್ನು ದೋಚಲು ಸಂಚು ರೂಪಿಸಿದ್ದ.
ಶನಿವಾರ ಸಂಜೆ ರುದ್ರಮ್ಮಗೆ ಕರೆ ಮಾಡಿದ ಕುಮಾರ, “ನಿನ್ನ ತಲೆನೋವಿಗೆ ಹಸಿರು ಮದ್ದು ಕೊಡಿಸುತ್ತೇನೆ ಬಾ” ಎಂದು ನಂಬಿಸಿ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿದ್ದ. ಕುಮಾರ ವೃದ್ಧೆಯನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗೋಲ್ಡನ್ ಟೆಂಪಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ರಸ್ತೆ ಬದಿಯ ಜೋಳದ ತೋಟದ ಬಳಿ ತನ್ನ ಇಬ್ಬರು ಸಹಚರರೊಂದಿಗೆ ಸೇರಿ, ವೃದ್ಧೆಯ ಬಾಯಿಗೆ ಬಟ್ಟೆ ತೂರಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಬಳಿಯಿದ್ದ 50 ಸಾವಿರ ರೂ. ನಗದು, ಚಿನ್ನದ ಚೈನು, ಓಲೆ ಹಾಗೂ ಬಳೆಗಳನ್ನು ದೋಚಿ ಶವವನ್ನು ಅಲ್ಲೇ ಎಸೆದು ಪರಾರಿಯಾಗಿದ್ದ. ಬಳಿಕ ಏನೂ ತಿಳಿಯದವನಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಫೋಟೋ ಹಾಕಿ ಹುಡುಕಾಡುವ ನಾಟಕವಾಡಿದ್ದ.
ಜಿಮ್ಮಿ’ ಕಣ್ಣೀರು - ತಡೆದರೂ ಕೇಳದ ಅಜ್ಜಿ;
ಶನಿವಾರ ಸಂಜೆ ಅಜ್ಜಿ ಆಟೋ ಹತ್ತಲು ಹೋಗುವಾಗ, ಅವರ ಪ್ರೀತಿಯ ನಾಯಿ ‘ಜಿಮ್ಮಿ’ ಅಪಾಯದ ಸುಳಿವು ಅರಿತು ಅಡ್ಡಬಂದು ಹೋಗದಂತೆ ತಡೆದಿತ್ತು. ಆದರೆ “ನನಗೆ ಯಾಕೆ ಅಡ್ಡ ಬರ್ತಿಯಾ” ಎಂದು ಬೈದ ಅಜ್ಜಿ ನಾಯಿಯನ್ನು ಪಕ್ಕಕ್ಕೆ ತಳ್ಳಿ ಆಟೋ ಹತ್ತಿ ಹೋಗಿ ಶವವಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಶಾಂತಿ ಹಾಗೂ ಮಗಳು ಸಾವಿತ್ರಿ ಕಣ್ಣೀರಿಟ್ಟಿದ್ದಾರೆ.
ಆರೋಪಿ ಅರೆಸ್ಟ್;
ಭಾನುವಾರವೂ ರುದ್ರಮ್ಮ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಕುಮಾರ ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದುದನ್ನು ಗಮನಿಸಿದ ಪೊಲೀಸರು, ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹಣದ ಆಸೆಗೆ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿದ್ದು, ಇತರ ಸಹಚರರಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಸ್ತುತ ಕುಶಾಲನಗರ ಗ್ರಾಮಾಂತರ ಹಾಗೂ ಬೈಲುಕುಪ್ಪೆ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.