Kodagu

ಕೃಷಿಯೇ ಕೊಡವ ಸಂಸ್ಕೃತಿಯ ಜೀವಾಳ: ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ

admincoorgdaily

ಕೃಷಿಯೇ ಕೊಡವ ಸಂಸ್ಕೃತಿಯ ಜೀವಾಳ: ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ
ಮಡಿಕೇರಿ :-ಕೊಡವರು ಮೂಲತಃ ಕೃಷಿಕರಾಗಿದ್ದು, ಕೃಷಿಯೇ ಜೀವನಾಧಾರ, ಕೃಷಿಯೇ ಸಂಸ್ಕøತಿಗೆ ಮೂಲವಾಗಿದ್ದು, ಕೈಲ್‍ಪೊವ್ದ್, ಕಾವೇರಿ ಚಂಗ್ರಾಂದಿ ಹಾಗೂ ಪುತ್ತರಿ ಹಬ್ಬಗಳು ಕೃಷಿಯಾಧಾರಿತವಾಗಿದೆ. ಕೊಡವರ ಮದುವೆಗಳಲ್ಲಿ ‘ಸಮ್ಮಂದ ಅಡ್‍ಕುವ’ ಪದ್ಧತಿಗೆ ಬಹಳ ಪ್ರಾಮುಖ್ಯತೆ ಹಾಗೂ ಪ್ರಾಶಸ್ತ್ಯವಿದೆ. ಇದರಲ್ಲಿ ಬರುವ ಪದ ಸಾಲುಗಳೆಲ್ಲವೂ ಕೃಷಿಯನ್ನು ಉಲ್ಲೇಖಿಸುತ್ತದೆ. ‘ಕ್ರೋಡದೇಶ’ದ ಆರಂಭವೇ ಕೃಷಿಗೆ ಹೊಂದಿಕೊಂಡಿದ್ದು, ಆ ಯುಗದ ಕೊಡವ ಹಿರಿಯರು ಸ್ವತಃ ಕೈಯ್ಯಾರೆ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ತಕ್ಕಂತೆ ಹದಗೊಳಿಸಿದ್ದು ಉಲ್ಲೇಖವಾಗಿದೆ. ಹೀಗಿರುವಾಗ ಕೊಡವ ಸಂಸ್ಕøತಿಗೆ ಕೃಷಿಯೇ ಜಿವಂತಿಕೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. 

ಗೋಣಿಕೊಪ್ಪ ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‍ನಲ್ಲಿ ಅಕಾಡೆಮಿಯ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಂಘದ ವಾರ್ಷಿಕ ಕೈಲ್‍ಪೊವ್ದ್ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು, ಕೊಡಗಿನ ಕೃಷಿಭೂಮಿಗಳು ಇತ್ತೀಚಿನ ವರ್ಷಗಳಲ್ಲಿ ಪರಭಾರೆಗೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದ್ದು, ಇಲ್ಲಿನ ನೆಲ-ಜಲ, ಸಾಮಾಜಿಕ ಸ್ಥಿತಿಗತಿ, ಸಾಂಸ್ಕೃತಿಕ ವೈಭವಗಳು ತನ್ನತನವನ್ನು ಕಳೆದುಕೊಳ್ಳುವ ಭೀತಿಯುಂಟಾಗುತ್ತಿದೆ. ತಾನು ಸ್ವತಃ ಸಂಪಾದಿಸಿದ ಆಸ್ತಿಯನ್ನು ಮಾತ್ರ ಪರರಿಗೆ ಮಾರಬಹುದಲ್ಲದೆ ಪಿತ್ರಾರ್ಜಿತ ಆಸ್ತಿಯನ್ನು ಮಾರುವ ನೈತಿಕತೆ ಇಲ್ಲವೆಂದು ಪ್ರತಿಪಾದಿಸಿದರು.
ಕೊಡವ ಪುಸ್ತಕ ಪತ್ತಾಯವನ್ನು ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸುವ ಉದ್ದೇಶವೆಂದರೆ ಈ ಮಣ್ಣಿನ ಹಿರಿತನ, ಸಾಂಸ್ಕೃತಿಕ ಸಿರಿತನವನ್ನು ಸಾಹಿತ್ಯಗಳ ಮೂಲಕ ತಿಳಿದುಕೊಳ್ಳುವುದಾಗಿದೆ. ಹೀಗಿರುವಾಗ ಆಯಾಯ ಜಾಗದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದಿಂದ ಪುಸ್ತಕಗಳನ್ನು ಪಡೆದುಕೊಂಡು ಓದುವುದರ ಮೂಲಕ ನಾಡಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಾಗಿದೆ ಎಂದರು.

ಕೊಡವ ಪುಸ್ತಕ ಪತ್ತಾಯವನ್ನು ಶ್ರೀ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷರಾದ ಅಜ್ಜಿಕುಟ್ಟಿರ ಸಿ. ದೇವಯ್ಯ ಅವರು ಅನಾವರಣಗೊಳಿಸಿ, ಮಾತನಾಡಿದ ಅವರು, ಪುಸ್ತಕ ಓದುವ ಅಭ್ಯಾಸ ಮರುಕಳಿಸುವಂತಾಗಬೇಕು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಪುಸ್ತಕ ಪ್ರೇಮಿಗಳಿಗೆ ಅನುಕೂಲಕರವಾಗಿದೆ ಎಂದರು.

ಶ್ರೀ ಇಗ್ಗುತಪ್ಪ ಕೊಡವ ಸಂಘದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ರೂ. ಹತ್ತು ಸಾವಿರದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಘದ ಅಧ್ಯಕ್ಷರಿಗೆ ನೀಡಲಾಯಿತು. ನಂತರ ಶ್ರೀ ಇಗ್ತುತಪ್ಪ ಕೊಡವ ಸಂಘ ಹಾಗೂ ಚೋಡುಮಡ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಬಹುತೇಕ ಸದಸ್ಯರು, ಉಪಾಧ್ಯಕ್ಷ ಮೂಕಳಮಡ ಸುಬ್ರಮಣಿ, ಖಜಾಂಚಿ ಅಯ್ಯಂಡ ಪೂವಯ್ಯ, ನಿರ್ದೇಶಕರುಗಳಾದ ಮಾಳೇಟಿರ ಗಣಪತಿ, ಚೋಡುಮಡ ರಾಜ ಅಯ್ಯಣ್ಣ, ಚೊಟ್ಟೆಯಂಡಮಡ ಅರುಣ್, ಚೋನಿರ ಮಂಜು ಮುತ್ತಣ್ಣ, ಮಲ್ಲಂಡ ಸುರೇಶ್, ನೆಲ್ಲಮಕ್ಕಡ ಪ್ರೇಮ, ಚೆರಿಯಪಂಡ ಲತ ಪೂಣಚ್ಚ, ಮೇಕೇರಿರ ಖಾನ, ಕುಪ್ಪಂಡ ಗಣೇಶ ಇದ್ದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ನಾಯಂದಿರ ಆರ್.ಶಿವಾಜಿ, ಪೊನ್ನಿರ ಯು.ಗಗನ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಮೊದಲು ನೂರೆರ ಧನ್ಯ ರವೀಂದ್ರ, ಪುಚ್ಚಿಮಂಡ ರೇಖ, ಬೆಂಜಂಡ ರಶ್ಮಿ ದೇವಯ್ಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಶಾಂತೆಯಂಡ ಮಧು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಚೋಡುಮಡ ರಾಜ ಅಯ್ಯಣ್ಣ ಅತಿಥಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಚೋನಿರ ಸತ್ಯ ವಂದಿಸಿದರು.