ಎಐಟಿಯುಸಿಯ 43ನೇ ರಾಷ್ಟ್ರೀಯ ಸಮ್ಮೇಳನ : ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ
admincoorgdaily

ಮಡಿಕೇರಿ : ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನ 43ನೇ ರಾಷ್ಟ್ರೀಯ ಸಮ್ಮೇಳನವು ನ.22ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ದೇಶದ ಕಾರ್ಮಿಕ ವರ್ಗದ ಹಕ್ಕುಗಳು ಹಾಗೂ ಬೇಡಿಕೆಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಈ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಸುಮಾರು 500 ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಎಐಟಿಯುಸಿ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ಕೆ.ವಿ.ಸುನಿಲ್ ತಿಳಿಸಿದ್ದಾರೆ.
ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಕಾರ್ಮಿಕ ಸಂಘಟನೆಯಾದ ಎಐಟಿಯುಸಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಉತ್ಪಾದನಾ ವಲಯ, ವಿದ್ಯುತ್, ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣಾ ವಲಯ, ಬ್ಯಾಂಕಿಂಗ್, ವಿಮೆ, ತೋಟಗಾರಿಕೆ, ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ ಸೈಪ್ರಸ್, ಪೋರ್ಚುಗಲ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪ್ಯಾಲೆಸ್ತೀನ್, ಇರಾನ್, ಬಹರೇನ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಾರ್ಮಿಕ ಪ್ರತಿನಿಧಿಗಳು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಕಾರ್ಮಿಕರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ;
ಇಂದಿನ ದಿನಗಳಲ್ಲಿ ಕಾರ್ಮಿಕ ವರ್ಗವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕಾರ್ಮಿಕರಿಗೆ ಸೂಕ್ತ ವೇತನ ದೊರೆಯುತ್ತಿಲ್ಲ. ನಿರುದ್ಯೋಗ, ಖಾಸಗೀಕರಣ, ಆರೋಗ್ಯ ಮತ್ತು ಶಿಕ್ಷಣ ಸೇವೆಗಳ ವ್ಯಾಪಾರೀಕರಣ ಸೇರಿದಂತೆ ಹಲವು ಸಮಸ್ಯೆಗಳು ಕಾರ್ಮಿಕರನ್ನು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಹಾಗೂ ಅಗತ್ಯಾಧಾರಿತ ಕನಿಷ್ಠ ವೇತನ ಜಾರಿಗೊಳಿಸುವುದು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಮತ್ತು ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಸಮ್ಮೇಳನದ ಪ್ರಮುಖ ಉದ್ದೇಶಗಳಾಗಿವೆ.
ದೇಶದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಆರೋಗ್ಯ ಸೇವೆ, ಪಿಂಚಣಿ, ಭವಿಷ್ಯ ನಿಧಿ ಸೇರಿದಂತೆ ಮೂಲಭೂತ ಸಾಮಾಜಿಕ ಭದ್ರತಾ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಗಳ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಗಿಗ್ ಕಾರ್ಮಿಕರಿಗೂ ಸೂಕ್ತ ಕಾನೂನು ರಕ್ಷಣೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗುವುದು ಎಂದು ಕೆ.ವಿ.ಸುನಿಲ್ ತಿಳಿಸಿದರು.
ಕೊಡಗಿನ ಜ್ವಲಂತ ಸಮಸ್ಯೆಗಳಿಗೂ ಆದ್ಯತೆ;
ಎಐಟಿಯುಸಿಯ ಗೌರವಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರು, ಕೃಷಿಕರು, ಆದಿವಾಸಿಗಳು, ತೋಟ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ದುಡಿಯುವ ವರ್ಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವಿಶೇಷವಾಗಿ ವನ್ಯಜೀವಿಗಳ ಹಾವಳಿಯಿಂದ ಜನಸಾಮಾನ್ಯರು, ಕೃಷಿಕರು ಹಾಗೂ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಾಡಾನೆ, ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳ ದಾಳಿಯಿಂದ ಜೀವಹಾನಿ, ಬೆಳೆ ನಾಶ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸುತ್ತಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದರು.
ವನ್ಯಜೀವಿ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ-ವನ್ಯಜೀವಿ ಸಂಘರ್ಷದಿಂದ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ನೆರವು ಹಾಗೂ ಬೆಳೆ ಮತ್ತು ಆಸ್ತಿ ನಷ್ಟ ಅನುಭವಿಸಿದವರಿಗೆ ತ್ವರಿತ ಪರಿಹಾರ ನೀಡಬೇಕು. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರ ಸುರಕ್ಷತೆಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು.
ಜಿಲ್ಲೆಯ ಭೂಮಿ ಸಮಸ್ಯೆಯೂ ಗಂಭೀರ ಸ್ವರೂಪ ಪಡೆದುಕೊಂಡಿದೆ. ಭೂಮಿಯ ಹಕ್ಕು, ಸಾಗುವಳಿ ಜಮೀನುಗಳ ಸಕ್ರಮೀಕರಣ, ಭೂ ದಾಖಲೆಗಳ ಗೊಂದಲ, ಅರಣ್ಯ ಹಾಗೂ ಕಂದಾಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹಲವು ಕುಟುಂಬಗಳು ಆತಂಕದಲ್ಲಿವೆ. ತಲೆತಲಾಂತರಗಳಿಂದ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ಜನರಿಗೆ ಕಾನೂನುಬದ್ಧ ಹಕ್ಕು ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಾಫಿ ತೋಟಗಳು, ನಿರ್ಮಾಣ ಕ್ಷೇತ್ರ, ಹೋಂಸ್ಟೇ ಹಾಗೂ ಇತರ ಅಸಂಘಟಿತ ಉದ್ಯೋಗ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಮಸ್ಯೆಗಳಿಗೂ ಸರ್ಕಾರ ಗಮನ ಹರಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯ, ವಸತಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಮಹಿಳಾ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಶೇಷ ಆದ್ಯತೆ ನೀಡಬೇಕು.
ಕೊಡಗು ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮಂದಿ ಬಡವರು ಹಾಗೂ ತೋಟ ಕಾರ್ಮಿಕರು ನಿವೇಶನ ರಹಿತರಾಗಿದ್ದಾರೆ. ಇವರುಗಳ ಸಮೀಕ್ಷೆ ನಡೆಸಿ ಶೀಘ್ರ ನಿವೇಶನ ಮತ್ತು ವಸತಿ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಕಳೆದ 15 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ಗ್ರಾಮ ಪಂಚಾಯ್ತಿಗೆ, ಜಿಲ್ಲಾ ಪಂಚಾಯ್ತಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರುಗಳಿಗೆ ಹಾಗೂ ಸರಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ಈ ಮನವಿಗಳ ಆಧಾರದ ಮೇಲೆ ಬಹಳ ಹಿಂದಿನಿಂದ ಅರ್ಜಿ ಸಲ್ಲಿಸಿದವರಿಗೆ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ನೀಡಬೇಕು ಎನ್ನುವ ಹಕ್ಕೊತ್ತಾಯಗಳನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ರಾಜಕೀಯ ಪಕ್ಷಗಳಿಂದ ಮೋಸ
ಚುನಾವಣೆ ಸಂದರ್ಭ;
ದುಡಿಯುವ ವರ್ಗಕ್ಕೆ ಸುಳ್ಳು ಭರವಸೆಗಳನ್ನು ನೀಡಿ ಮತಗಳನ್ನು ಗಳಿಸುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ಬಡವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಮೋಸ ಮಾಡುತ್ತಿದ್ದಾರೆ ಎಂದು ಹೆಚ್.ಎಂ.ಸೋಮಪ್ಪ ಆರೋಪಿಸಿದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡವರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ರಾಜಕಾರಣಿಗಳಿಗೆ ಯಾವುದೇ ಚಿಂತೆ ಇಲ್ಲದಾಗಿದೆ, ಬಡವರ ಬದುಕಿನ ಬಗ್ಗೆ ಚರ್ಚಿಸದೆ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ಕೊಡಗಿನ ಇಬ್ಬರು ಶಾಸಕರು ದುಡಿಯುವ ವರ್ಗದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಹೋರಾಟದ ರೂಪುರೇಷೆ;
ಬೆಂಗಳೂರಿನಲ್ಲಿ ನಡೆಯಲಿರುವ ಎಐಟಿಯುಸಿ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಕಾರ್ಮಿಕ ವರ್ಗದ ಸಮಸ್ಯೆಗಳ ಜೊತೆಗೆ ವಿವಿಧ ರಾಜ್ಯಗಳ ಪ್ರಾದೇಶಿಕ ಸಮಸ್ಯೆಗಳು ಹಾಗೂ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ಆ ಮೂಲಕ ಮುಂದಿನ ಹಂತದ ಹೋರಾಟ ಮತ್ತು ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತದೆ.
ಕೊಡಗಿನ ವನ್ಯಜೀವಿ ಹಾವಳಿ, ಭೂಮಿಯ ಹಕ್ಕಿನ ಸಮಸ್ಯೆ, ಕಾರ್ಮಿಕರ ಶೋಷಣೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಬದುಕಿನ ಸಂಕಷ್ಟಗಳಿಗೂ ಸೂಕ್ತ ಗಮನ ಸೆಳೆಯುವ ಅಗತ್ಯವಿದೆ. ದುಡಿಯುವ ವರ್ಗದ ಹಕ್ಕುಗಳ ರಕ್ಷಣೆ ಹಾಗೂ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಸಂಘಟಿತ ಹೋರಾಟ ಅನಿವಾರ್ಯವಾಗಿದೆ.
ಎಐಟಿಯುಸಿಯ 43ನೇ ರಾಷ್ಟ್ರೀಯ ಸಮ್ಮೇಳನವು ದೇಶದ ಕಾರ್ಮಿಕ ಚಳುವಳಿಗೆ ಹೊಸ ದಿಕ್ಕು ನೀಡುವ ಜೊತೆಗೆ ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮುಂದಿನ ಹೋರಾಟದ ರೂಪುರೇಷೆಗೆ ಐತಿಹಾಸಿಕ ವೇದಿಕೆಯಾಗಲಿದೆ ಎಂದು ಹೆಚ್.ಎಂ.ಸೋಮಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸೀತಾರಾಮ್ ಉಪಸ್ಥಿತರಿದ್ದರು.