ಆಲೇಮಾಡ ತೋಕ್ ನಮ್ಮೆಗೆ ಅದ್ಧೂರಿ ತೆರೆ: ಮುಂದಿನ ವರ್ಷದ ಆಯೋಜಕರಾದ ಮಂಡೀರ ಒಕ್ಕಕ್ಕೆ ರೋಲಿಂಗ್ ಟ್ರೋಫಿ ಹಸ್ತಾಂತರ
admincoorgdaily


ಪೊನ್ನಂಪೇಟೆ, ಅ.12: ಕೊಡವ ಸಂಸ್ಕೃತಿ, ಪರಂಪರೆ, ಶೌರ್ಯ ಹಾಗೂ ಐಕ್ಯತೆಯನ್ನು ಸಾರುವ ಆಲೇಮಾಡ ಒಕ್ಕದ ವತಿಯಿಂದ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಎರಡನೇ ವರ್ಷದ ಆಲೇಮಾಡ ತೋಕ್ ನಮ್ಮೆ-2026ಕ್ಕೆ ಅದ್ದೂರಿ ತೆರೆ ಬಿದ್ದಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಲೇಮಾಡ ಒಕ್ಕದ ಅಧ್ಯಕ್ಷ ಎ.ಎನ್. ದೇವಯ್ಯ ವಹಿಸಿದ್ದರು. ಒಲಿಂಪಿಯನ್ ಹಾಕಿ ಆಟಗಾರ ಚೆಪ್ಪುಡೀರ ಎಸ್. ಪೂಣಚ್ಚ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಲೇಮಾಡ ಒಕ್ಕದ ಹಿರಿಯರಾದ ಬಬ್ಬು ಕಾರ್ಯಪ್ಪ ಹಾಗೂ ಕಾಫಿ ಬೆಳೆಗಾರ್ತಿ ಆಲೇಮಾಡ ಲಲಿತಾ ಶ್ರೀನಿವಾಸ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಚೆಪ್ಪುಡೀರ ಎಸ್. ಪೂಣಚ್ಚ ಮಾತನಾಡಿ, ಕೊಡವ ಪದ್ಧತಿ ಮತ್ತು ಪರಂಪರೆಯ ಪ್ರಮುಖ ಭಾಗವಾಗಿರುವ ಕೋವಿಯ ಕುರಿತು ಚಿಕ್ಕ ಮಕ್ಕಳಿಗೂ ಅರಿವು ಮೂಡಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ವಿರಳವಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಪೋಷಕರು ಈ ಬಗ್ಗೆ ಗಮನಹರಿಸಿ, ಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕಳೇರ ಕುಶಾಲಪ್ಪ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಆಲೆಮಾಡ ತೋಕ್ ನಮ್ಮೆಯ ಈ ಸಂಭ್ರಮದ ಸಂದರ್ಭದಲ್ಲಿ, ಕಳೆದ ಎರಡು ದಶಕಗಳಿಂದ ಕ್ರೀಡಾ ಕ್ಷೇತ್ರದ ಬೆಳವಣಿಗೆಗಾಗಿ ನಿರಂತರವಾಗಿ ತಮ್ಮ ಪ್ರಬುದ್ಧ ಕ್ರೀಡಾ ಬರಹಗಳು, ಆಕರ್ಷಕ ವಿಶ್ಲೇಷಣೆಗಳು ಹಾಗೂ ಮೈಮನ ರೋಮಾಂಚನಗೊಳಿಸುವ ವೀಕ್ಷಕ ವಿವರಣೆಯ (ಕಾಮೆಂಟರಿ) ಮೂಲಕ ಕ್ರೀಡಾಪ್ರೇಮಿಗಳನ್ನು ರಂಜಿಸುವುದರ ಜೊತೆಗೆ, ಯುವ ಪ್ರತಿಭೆಗಳನ್ನು ಸದಾ ಪ್ರೋತ್ಸಾಹಿಸುತ್ತಾ, ಶ್ರಮಿಸುತ್ತಿರುವ ಚೆಪ್ಪುಡೀರ ಕಾರ್ಯಪ್ಪ ಅವರಿಗೆ, ಕ್ರೀಡಾ ರಂಗದ ಮೇಲಿನ ಅವರ ಅಪಾರ ಕಾಳಜಿ, ಬದ್ಧತೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತೋಕ್ ನಮ್ಮೆಯ ವಿಶೇಷತೆಗಳು
ಎರಡು ದಿನಗಳ ಕಾಲ ನಡೆದ ತೋಕ್ ನಮ್ಮೆಯಲ್ಲಿ ಹಲವು ವಿಶೇಷತೆಗಳು ಗಮನ ಸೆಳೆದವು. ಎರಡನೇ ದಿನ ಕೊಡವ ವಧು-ವರರ ತಂದ್ ಬೆಂದ್ ಕಾರ್ಯವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ 12 ಮಕ್ಕಳ ಹೆಸರನ್ನು ಅವರ ತಂದೆ-ತಾಯಿಯರು ನೋಂದಾಯಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಒಂಬತ್ತು ಪತಿ-ಪತ್ನಿ ಜೋಡಿಗಳು ಭಾಗವಹಿಸಿದ್ದು ಗಮನಾರ್ಹವಾಗಿತ್ತು.
94 ವರ್ಷದ ಹಿರಿಯ ಗುರಿಗಾರ್ತಿ ಪಾರುಂಗಡ ರೋಹಿಣಿ ಭೀಮಯ್ಯ ಅವರನ್ನು ಶಾಸಕ ಎ.ಎಸ್. ಪೊನ್ನಣ್ಣ ಶಾಲು ಹೊದಿಸಿ ಗೌರವಿಸಿದ್ದು ಕಾರ್ಯಕ್ರಮದ ವಿಶೇಷ ಕ್ಷಣವಾಗಿತ್ತು.
ತೋಕ್ ನಮ್ಮೆಯ ಅಂಗವಾಗಿ ಶಾಲಾ ಮೈದಾನವನ್ನು ಸಮಿತಿಯ ಸದಸ್ಯರು ಎರಡು ದಿನಗಳ ಕಾಲ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಆಹಾರ ಸಮಿತಿಯ ಆಲೇಮಾಡ ರೋಷನ್ ಉತ್ತಪ್ಪ ಹಾಗೂ ನವೀನ್ ದೇವಯ್ಯ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದನ್ನು ಮನಗಂಡು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.
ಮಂಡೀರ ಒಕ್ಕಕ್ಕೆ ರೋಲಿಂಗ್ ಟ್ರೋಫಿ ಹಸ್ತಾಂತರ
2027ರಲ್ಲಿ ತೋಕ್ ನಮ್ಮೆಯನ್ನು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಂಡೀರ ಒಕ್ಕದವರು ಆಯೋಜಿಸಲಿದ್ದಾರೆ. ಮುಂದಿನ ಆತಿಥೇಯರಿಗೆ ಆಲೇಮಾಡ ಒಕ್ಕದವರು ಒಡ್ಡೋಲಗದೊಂದಿಗೆ ಪುಷ್ಪಾರ್ಚನೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ತೋಕ್ ನಮ್ಮೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ ರೋಲಿಂಗ್ ಟ್ರೋಫಿಯನ್ನು ಹಸ್ತಾಂತರಿಸಲಾಯಿತು.ಎರಡು ದಿನಗಳಿಗೆ ಸೀಮಿತವಾಗಿದ್ದ ಸ್ಪರ್ಧೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸ್ಪರ್ಧಾಳುಗಳಿಗೆ ಅನುಕೂಲವಾಗುವಂತೆ ಮುಂದಿನ ವರ್ಷಗಳಲ್ಲಿ ತೋಕ್ ನಮ್ಮೆಯನ್ನು ಹೆಚ್ಚಿನ ದಿನಗಳವರೆಗೆ ವಿಸ್ತರಿಸಬೇಕೆಂದು ಸಮಿತಿಯ ವತಿಯಿಂದ ಮನವಿ ಮಾಡಲಾಯಿತು.
ತೋಕ್ ನಮ್ಮೆ ಫಲಿತಾಂಶ
12 ಬೋರ್ ಮತ್ತು .22 ವಿಭಾಗ:
- ಪ್ರಥಮ ಬಹುಮಾನ: ಅಪ್ಪ, ಮಗ ಚೌಂಡಿರ ಮಾಚಯ್ಯ ಮತ್ತು ಭೀಮಯ್ಯ — ರೂ.60,000 ನಗದು ಹಾಗೂ ಟ್ರೋಫಿ.
- ದ್ವಿತೀಯ ಬಹುಮಾನ: ಅಪ್ಪ, ಮಗಳು ಬಡುವಂಡ ಧನು ದೇವಯ್ಯ ಮತ್ತು ತ್ರಿಶಾಲಿ ತಂಗಮ್ಮ — ರೂ.50,000 ನಗದು ಹಾಗೂ ಟ್ರೋಫಿ.
- ತೃತೀಯ ಬಹುಮಾನ: ಚೇನಂಡ ಸಚಿನ್ ಅಯ್ಯಪ್ಪ ಮತ್ತು ಬೋಪಣ್ಣ — ರೂ.40,000 ನಗದು ಹಾಗೂ ಟ್ರೋಫಿ.
- ನಾಲ್ಕನೇ ಬಹುಮಾನ: ಚೋನಿರ ಸಜನ್ ಉತ್ತಪ್ಪ ಮತ್ತು ಸೋಮಣ್ಣ — ರೂ.30,000 ನಗದು ಹಾಗೂ ಟ್ರೋಫಿ.
- ಐದನೇ ಬಹುಮಾನ: ಜಮ್ಮಡ (ಕೈಕೇರಿ) ಕರಣ್ ಮತ್ತು ಪೊನ್ನಪ್ಪ — ರೂ.20,000 ನಗದು ಹಾಗೂ ಟ್ರೋಫಿ.
- ಆರನೇ ಬಹುಮಾನ: ದಿವಂಗತ ಚೀರಂಡ ಕಂದಾ ಸುಬ್ಬಯ್ಯ ಅವರ ಜ್ಞಾಪಕಾರ್ಥವಾಗಿ ಅವರ ಪತ್ನಿ ರೂಪ ಹಾಗೂ ಪುತ್ರ ಅಯ್ಯಪ್ಪ ನೀಡಿದ ರೂ.10,000 ನಗದು ಬಹುಮಾನವನ್ನು ಅಪ್ಪಂಡೇರಂಡ ಬೋಪಣ್ಣ ಮತ್ತು ರಜನೀಶ್ ಪಡೆದುಕೊಂಡರು.
ವಿಶೇಷ ಪ್ರಶಸ್ತಿಗಳು:
- ಉತ್ತಮವಾಗಿ ನಿರ್ವಹಿಸಲಾದ ಕೋವಿ ಬಳಸಿದ ಸ್ಪರ್ಧಾಳು: ಬಯವಂಡ ಧನು ದೇವಯ್ಯ.
- ಹಿರಿಯ ಶೂಟರ್: ಬುಟ್ಟಿಯಂಡ ಚಿಮ್ಮಿ ಪೂಣಚ್ಚ.
- ಹಿರಿಯ ಮಹಿಳಾ ಶೂಟರ್: ಪಾರುಂವಗಡ ರೋಹಿಣಿ ಭೀಮಯ್ಯ.
- ಉದಯೋನ್ಮುಖ ಶೂಟರ್: ಚೊಟ್ಟೆಕಾಳಪಂಡ ಅಪ್ಪಣ್ಣ.
ಏರ್ ರೈಫಲ್ ವಿಭಾಗ
- ಪ್ರಥಮ: ಬಡುವಂಡ ಶ್ಲೋಕ್ ಸುಬ್ಬಯ್ಯ — ರೂ.10,000 ನಗದು ಹಾಗೂ ಟ್ರೋಫಿ.
- ದ್ವಿತೀಯ: ಬಡುವಂಡ ಧನು ದೇವಯ್ಯ — ರೂ.7,500 ನಗದು ಹಾಗೂ ಟ್ರೋಫಿ.
- ತೃತೀಯ: ಚೆಪ್ಪುಡೀರ ದರ್ಶನ್ ಬೆಳ್ಳಿಯಪ್ಪ — ರೂ.5,000 ನಗದು ಹಾಗೂ ಟ್ರೋಫಿ. ಆಲೇಮಾಡ ಸುತನ್ ಅಯ್ಯಪ್ಪ, ಮುದ್ದಿಯಡ ಮಂಜು ಗಣಪತಿ , ಆಲೇಮಾಡ ಚರ್ಮಣ, ನೆಲ್ಲಮಕ್ಕಡ ಶರತ್ ಸೋಮಣ್ಣ, ಅಜ್ಜಿಕುಟ್ಟೀರ ರಂಜಿ, ತಡಿಯಂಗಡ ಕಂಬ, ಕೊಟ್ಟಂಗಡ ಭೀಮಯ್ಯ ಹಾಗೂ ಇತರರು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಸಂಘಟಕರಿಗೆ ಅಭಿನಂದನೆ
ತೋಕ್ ನಮ್ಮೆಯ ಸಂಪೂರ್ಣ ಛಾಯಾಗ್ರಹಣ ಮತ್ತು ಸಾಮಾಜಿಕ ಜಾಲತಾಣದ ಜವಾಬ್ದಾರಿ ನಿರ್ವಹಿಸಿದ ಲೆನ್ಸ್ ಅಂಡ್ ಲೆಗೆಸಿ ಸಂಸ್ಥೆ ಹಾಗೂ ತಾಂತ್ರಿಕ ಸಹಾಯಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸ್ಪರ್ಧೆ ಯಶಸ್ವಿಯಾಗಿ ನಡೆಯಲು ಮಾರ್ಕ್ಸ್‌ಮೆನ್ ಅಸೋಸಿಯೇಷನ್ ನೀಡಿದ ಸಹಕಾರ, ಸಲಹೆ ಮತ್ತು ಮಾರ್ಗದರ್ಶನ ಮಹತ್ವದ್ದಾಗಿತ್ತು.
ಆಲೇಮಾಡ ಲಿಲ್ಲಿ ಪ್ರಾರ್ಥಿಸಿದರು. ರೇಷ್ಮಾ ಸ್ವಾಗತಿಸಿದರು. ಗಾಯತ್ರಿ ತಿಮ್ಮಯ್ಯ,ರೀನಾ ರೋಷನ್ ನಿರೂಪಿಸಿದರು. ಡಾ ಎ .ಜಿ ತಿಮ್ಮಯ್ಯ ವಂದಿಸಿದರು.
ಈ ಸಂದರ್ಭ ಆಲೇಮಾಡ ತೋಕ್ ನಮ್ಮೆ ಸಮಿತಿಯ ಅಧ್ಯಕ್ಷ ಎ.ಟಿ. ಸೋಮಣ್ಣ, ಉಪಾಧ್ಯಕ್ಷ ಎ.ಡಿ. ಸುಧೀರ್, ಕಾರ್ಯದರ್ಶಿ ಎ.ಟಿ. ಬೋಪಣ್ಣ, ಆಲೇಮಾಡ ಒಕ್ಕದ ಅಧ್ಯಕ್ಷ ಎ.ಎನ್. ದೇವಯ್ಯ, ನವೀನ್ ದೇವಯ್ಯ, ರೋಷನ್ ಉತ್ತಪ್ಪ, ಕೀರ್ತನ್ ತಮ್ಮಯ್ಯ, ಜಗತ್ ನಾಚಪ್ಪ, ಸೋಮಣ್ಣ, ವಿನು, ಸುತನ್, ವಿಬಿನ್, ವಿತನ್, ಭವನ್, ಸುಧೀರ್, ಬೋಪಣ್ಣ, ಪ್ರಶಾಂತ್, ಪ್ರಖ್ಯಾತ್ ಸೇರಿದಂತೆ ಒಕ್ಕದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ತಾಮನೆ ಮಹಿಳೆಯರು, ಕ್ರೀಡಾಪಟುಗಳು ಹಾಗೂ ಹೆಚ್ಚಿನ ಸಂಖ್ಯೆಯ ಕೊಡವ ಜನಾಂಗದವರು ಭಾಗವಹಿಸಿದ್ದರು.