ಆಲೆಮಾಡ ತೋಕ್ ನಮ್ಮೆಗೆ ಶುಭಕೋರಿದ ಪೆಮ್ಮಂಡ ಒಕ್ಕ
admincoorgdaily

ಪೊನ್ನಂಪೇಟೆ;ಪ್ರಥಮ ಬಾರಿಗೆ ಪೊನ್ನಂಪೇಟೆಯಲ್ಲಿ ತೋಕ್ ನಮ್ಮೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕೊಡವ ಕೌಟುಂಬಿಕ ತೋಕ್ ನಮ್ಮೆಗೆ ಮುನ್ನುಡಿ ಬರೆದ ಪೆಮ್ಮಂಡ ಒಕ್ಕದ ವತಿಯಿಂದ 2 ನೇ ವರ್ಷದ ಕೊಡವ ಕೌಟುಂಬಿಕ ಆಲೆಮಾಡ ತೋಕ್ ನಮ್ಮೆಗೆ ಶುಭಕೋರಲಾಯಿತು.
ತೂಚಮಕೇರಿಯ ಪೆಮ್ಮಂಡ ಐನ್ ಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆಮ್ಮಂಡ ಒಕ್ಕದ ಅಧ್ಯಕ್ಷ ಪೆಮ್ಮಂಡ ಅರುಣ ಮಾತನಾಡಿ, ಮೊದಲ ಬಾರಿಗೆ ನಮ್ಮ ಒಕ್ಕದಿಂದ ತೋಕ್ ನಮ್ಮೆಯನ್ನು ಯಶಸ್ವಿಯಾಗಿ ನಡೆಸಲು ಕೊಡಗಿನ ಎಲ್ಲಾ ಕೊಡವ ಕುಟುಂಬಗಳು ಸಹಕಾರ ನೀಡಿದವು. ಪ್ರಸಕ್ತ ವರ್ಷ ಅಕ್ಟೋಬರ್ 10 ಮತ್ತು 11 ರಂದು ನಡೆಯಲಿರುವ ಆಲೆಮಾಡ ತೋಕ್ ನಮ್ಮೆಗೂ ಎಲ್ಲರ ಸಹಕಾರ ಇರಲಿ. ಕೊಡವರ ಕೋವಿ ಹಕ್ಕು ಎಲ್ಲರಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ತೋಕ್ ನಮ್ಮೆಯನ್ನು ಆಯೋಜಿಸಲಾಗುತ್ತಿದೆ. ಆಲೆಮಾಡ ಒಕ್ಕದ ತೋಕ್ ನಮ್ಮೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಕಳೆದ ವರ್ಷದ ತೋಕ್ ನಮ್ಮೆಯಲ್ಲಿ ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಯಶಸ್ಸಿಗೆ ಕಾರಣರಾದರು. ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರು ಆರಂಭದಲ್ಲಿ ಎಷ್ಟು ಕಷ್ಟಪಟ್ಟರೋ, ಅದೇ ರೀತಿ ನಾವು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ನಮ್ಮೆಯನ್ನು ನಡೆಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಕೊಡವರ ಆಚಾರ-ವಿಚಾರ, ಕೋವಿ ಹಕ್ಕಿನ ವಿಚಾರದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ. ಇನ್ನು ಮುಂದೆಯೂ ಹಾಕಿ ಹಾಗೂ ಕ್ರಿಕೆಟ್ ನಮ್ಮೆಯಂತೆ ತೋಕ್ ನಮ್ಮೆಯೂ ಯಶಸ್ವಿಯಾಗಿ ನಡೆಯಲು ಕೊಡವ ಬಾಂಧವರು ಸಹಕಾರ ನೀಡಬೇಕು ಎಂದು ಆಶಿಸಿದರು.
ನಿವೃತ್ತ ಯೋಧ ಪೆಮ್ಮಂಡ ಜಿಮ್ಮಿ ಮಾತನಾಡಿ, ತೋಕ್ ನಮ್ಮೆ ಆಯೋಜನೆ ಮಾಡುವುದು ಸುಲಭದ ಮಾತಲ್ಲ. ಕಟ್ಟಡಕ್ಕೆ ಅಡಿಪಾಯ ಹಾಕಿದಂತೆ ಮೊದಲ ಬಾರಿಗೆ ನಮ್ಮ ಒಕ್ಕದಿಂದ ಯಶಸ್ವಿಯಾಗಿ ಆಯೋಜನೆ ಮಾಡಿದ್ದೇವೆ. ಕೋವಿ ಕೊಡವರ ಹಕ್ಕು, ಹೆಗ್ಗುರುತು. ಕೋವಿಗೂ ಕೊಡವರಿಗೂ ಅವಿನಾಭಾವ ಸಂಬಂಧವಿದೆ. ಈ ಬಾರಿಯ ಆಲೆಮಾಡ ಒಕ್ಕದ ತೋಕ್ ನಮ್ಮೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪೆಮ್ಮಂಡ ತೋಕ್ ನಮ್ಮೆಯ ಕ್ರೀಡಾ ಅಧ್ಯಕ್ಷ ಮಂಜು ಬೋಪಣ್ಣ ಮಾತನಾಡಿ, ಕೋವಿ ಸಾಧಾರಣ ವಿಷಯವಲ್ಲ, ಕೊಡವರ ಪೂಜಾ ಸ್ಥಾನದಲ್ಲಿ ಪ್ರಮುಖ ಆಯುಧವಾಗಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಈ ಕೋವಿ ಕೊಡವರಿಗೆ ವೀರರು, ಶೂರರು ಎಂಬ ಹೆಸರು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದನ್ನು ಯಾವುದೇ ಕಾರಣಕ್ಕೂ ನಮ್ಮ ಜನಾಂಗದವರು ಮರೆಯಬಾರದು. ಮೊದಲ ಬಾರಿಗೆ ನಾವು ತೋಕ್ ನಮ್ಮೆಯನ್ನು ಆಯೋಜಿಸಿದಾಗ ಜನಾಂಗ ಬಾಂಧವರು ಬೆನ್ನೆಲುಬಾಗಿ ನಿಂತರು. ಆಲೆಮಾಡ ಒಕ್ಕದವರು ಈ ಬಾರಿ ಅತ್ಯಂತ ಯಶಸ್ವಿಯಾಗಿ ನಡೆಸುತ್ತಾರೆ ಎಂಬ ಭರವಸೆ ಇದೆ. ತೋಕ್ ನಮ್ಮೆಯಲ್ಲಿ ಕೋವಿಯನ್ನು ಹೇಗೆ ಬಳಸಬೇಕು, ಎಂದು ಕ್ರೀಡಾ ಪಟುಗಳು ಸರಿಯಾಗಿ ಮನದಟ್ಟು ಮಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪೆಮ್ಮಂಡ ಒಕ್ಕದ ಕಾರ್ಯದರ್ಶಿ ಪೆಮ್ಮಂಡ ಎನ್. ಕರುಂಬಯ್ಯ, ಖಜಾಂಚಿ ಪೆಮ್ಮಂಡ ಗಿಣಿ ನಾಚಪ್ಪ, ಸದಸ್ಯರಾದ ಪೆಮ್ಮಂಡ ಬ್ಯಾಟ್ನಿ ಕಂಠೇಶ್, ಪೆಮ್ಮಂಡ ಟಿ. ಧರ್ಮಜ, ಪೆಮ್ಮಂಡ ಬಿ. ಬೋಪಯ್ಯ, ಪೆಮ್ಮಂಡ ಪಿ.ಬಿ. ನೂತನ್ ಉಪಸ್ಥಿತರಿದ್ದು ಆಲೆಮಾಡ ತೋಕ್ ನಮ್ಮೆಗೆ ಶುಭಕೋರಿದರು.